ನವದೆಹಲಿ, ಆ 20 (DaijiworldNews/DB): ಅಬಕಾರಿ ನೀತಿಯಡಿ ನಡೆದ ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರೇ ಪ್ರಮುಖ ಸಂಚುಕೋರ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
ತಮ್ಮ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿಕೆ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಠಾಕೂರ್, ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾರನ್ನು ಸಿಬಿಐ ಆರೋಪಿಯನ್ನಾಗಿ ಮಾಡಿದೆ. ಆದರೆ ಪ್ರಕರಣದ ಪ್ರಮುಖ ಸಂಚುಕೋರ ಸಿಎಂ ಅರವಿಂದ ಕೇಜ್ರೀವಾಲ್ ಎಂದರು.
ಮದ್ಯ ಹಗರಣದಲ್ಲಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಆ ಮೂಲಕ ಅವರ ಮುಖವಾಡ ಕಳಚಿದಂತಾಗಿದೆ. ಒಂದು ವೇಳೆ ಅವರ ಮದ್ಯ ನೀತಿ ಸರಿಯಾಗಿರುತ್ತಿದ್ದರೆ ಅದನ್ನು ಅವರು ವಾಪಾಸ್ ಪಡೆದುಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದರು.
ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಕಂಡು ಬಂದಿದೆ. ಹೀಗಾಗಿ ಕೇಜ್ರೀವಾಲ್ ಸರ್ಕಾರ ಆ ನೀತಿಯನ್ನು ಹಿಂಪಡೆದುಕೊಂಡಿದೆ ಎಂದು ಇದೇ ವೇಳೆ ಆಪಾದಿಸಿದರು.
ಸಂಸದ ಮನೋಜ್ ತಿವಾರಿ ಮತ್ತು ಆದೇಶ್ ಗುಪ್ತಾ ಅವರು ಮಾತನಾಡಿ, ಮನೀಶ್ ಸಿಸೋಡಿಯಾ ಅಂದರೆ ಮನಿ ಎಸ್ಎಚ್ಎಚ್ ಎಂದು ಅರ್ಥ ಎಂಬುದಾಗಿ ತಿಳಿಸಿದರು.