ಕೊಡಗು, ಆ 20 (DaijiworldNews/DB): ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿಯನ್ನು ಕುಶಾಲನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸೋಮವಾರ ಪೇಟೆಯ ಸಂಪತ್ ಬಂಧಿತ ಆರೋಪಿ. ಈತ ಕುಶಾಲನಗರ ನ್ಯಾಯಾಲಯಕ್ಕೆ ಶರಣಾಗಲು ಬಂದ ವೇಳೆ ಪೊಲೀಸರು ಬಂಧಿಸಿದರು.
ಬಂಧನಕ್ಕೂ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಪತ್, ನಾನು ಮೂಲತಃ ಜೆಡಿಎಸ್ ಕಾರ್ಯಕರ್ತನಾಗಿದ್ದು, ಮಾಜಿ ಸಚಿವ ಜೀವಿಜಯ ಅವರ ಬೆಂಬಲಿಗ. ಇತ್ತೀಚೆಗೆ ಜೀವಿಜಯ ಅವರು ಕಾಂಗ್ರೆಸ್ ಸೇರ್ಪಡೆಗೊಂಡಾಗ ನಾನೂ ಕಾಂಗ್ರೆಸ್ಗೆ ಸೇರಿದ್ದೇನೆ. ಸದ್ಯ ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿದ್ದಾನೆ.
ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊಡಗಿನವರು ದನದ ಮಾಂಸ ತಿನ್ನುತ್ತಾರೆಂದು ಹೇಳಿದ್ದಾರೆ. ಟಿಪ್ಪು ಸುಲ್ತಾನ್ ವಿಷಯದಲ್ಲಿಯೂ ಕೊಡವರಿಗೆ ನೋವುಂಟು ಮಾಡಿದ್ದರು. ಇದರಿಂದ ನನಗೆ ಅವರ ಮೇಲೆ ಆಕ್ರೋಶವಿತ್ತು. ನಾನು ಮೊದಲು ಹಿಂದೂ, ಆಮೇಲೆ ಪಕ್ಷ. ಅವರ ಹಿಂದೂ ವಿರೋಧಿ ಹೇಳಿಕೆಗಳನ್ನು ಸಹಿಸದೆ ಅವರ ಕಾರಿಗೆ ಮೊಟ್ಟೆ ಎಸೆದಿದ್ದೇನೆ ಎಂದು ಆತ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.