ನವದೆಹಲಿ, ಆ 20 (DaijiworldNews/DB): 2024ರ ಲೋಕಸಭೆ ಚುನಾವಣೆಯು ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಚುನಾವಣೆ ಯುದ್ದವಾಗಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕೇಜ್ರೀವಾಲ್ ಅವರನ್ನು ಭಯಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮೋದಿ ಮಾಡುತ್ತಿದ್ದಾರೆ. ಸಿಬಿಐ ಇನ್ನು ಮೂರ್ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಲೂಬಹುದು. ಆದರೆ ಇದಕ್ಕೆ ಹೆಸರುವುದಿಲ್ಲ. ನಮ್ಮನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆ ಕೇಜ್ರೀವಾಲ್ ಮತ್ತು ಮೋದಿ ನಡುವಿನ ಯುದ್ದ ಎಂದರು.
ನನ್ನ ನಿವಾಸ ಮಾತ್ರವಲ್ಲ ಶಿಕ್ಷಣ ಇಲಾಖೆಯ ಕಚೇರಿ ಮೇಲೂ ಸಿಬಿಐ ದಾಳಿಯಾಗಿದೆ. ಸಿಬಿಐ ಅಧಿಕಾರಿಗಳು ಒಳ್ಳೆಯವರು. ಆದರೆ ಅವರು ಹೈಕಮಾಂಡ್ ಆದೇಶ ಪಾಲಿಸುವುದು ಅವರಿಗೆ ಅನಿವಾರ್ಯ. ನನಗೆ ಯಾವುದೇ ಹಾನಿಯುಂಟು ಮಾಡದ್ದಕ್ಕೆ ಮತ್ತು ಉತ್ತಮ ವರ್ತನೆ ತೋರಿದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಇದೇ ವೇಳೆ ತಿಳಿಸಿದರು.
ಸುಖಾಸುಮ್ಮನೆ ವಿವಾದ ಮಾಡುತ್ತಿರುವ ಅಬಕಾರಿ ನೀತಿ ದೇಶದ ಅತ್ಯುತ್ತಮ ನೀತಿಯಾಗಿದೆ. ಪಾರದರ್ಶಕ ಮತ್ತು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಅದನ್ನು ರೂಪಿಸಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ನೀತಿಯನ್ನು ವಿಫಲಗೊಳಿಸಲು ಯತ್ನಿಸದೇ ಇರುತ್ತಿದ್ದರೆ ಇದರಿಂದ ಪ್ರತಿವರ್ಷ ಸರ್ಕಾರಕ್ಕೆ ಕನಿಷ್ಠ 10,000 ಕೋಟಿ ರೂ. ಆದಾಯ ಲಭಿಸುತ್ತಿತ್ತು ಎಂದು ಮನೀಶ್ ಸಿಸೋಡಿಯಾ ಹೇಳಿದರು.
ಮದ್ಯವಾಗಲೀ, ಅಬಕಾರ ಹಗರಣವಾಗಲೀ ಮೋದಿಯವರ ಸಮಸ್ಯೆಯಲ್ಲ. ಕೇಜ್ರೀವಾಲ್ ಅವರೇ ಮೋದಿಗೆ ಸಮಸ್ಯೆ. ಅವರನ್ನು ತಡೆಯಲು ಸಿಬಿಐ ದಾಳಿ ನಡೆಯುತ್ತಿದೆ ಎಂದು ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದರು.