ಹಾಸನ, ಆ 20 (DaijiworldNews/DB): ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆಗೈದ ಘಟನೆ ಹಾಸನ ಹೊರವಲಯದ ಭುವನಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರಸೀಕೆರೆ ನಿವಾಸಿ ಶರಣ್ಯಾ ಕೊಲೆಯಾದವರು. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಕೊಲೆ ಆರೋಪಿ. ಭರತ್ ತನ್ನನ್ನು ಪ್ರೀತಿಸುವಂತೆ ಶರಣ್ಯಾಳಿಗೆ ಕಿರುಕುಳ ನೀಡುತ್ತಿದ್ದ. ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆತ ಶರಣ್ಯಾಳೊಂದಿಗೆ ಹಲವು ಬಾರಿ ಜಗಳ ಕಾಯ್ದಿದ್ದ. ಆಕೆ ತನಗೆ ಸಿಗುವುದಿಲ್ಲವೆಂದು ಗೊತ್ತಾದ ಬಳಿಕ ಆಕೆಯನ್ನು ಕೊಲೆಗೈಯಲು ಸಂಚು ರೂಪಿಸಿದ್ದ ಆತ ಆಲ್ಟೋ ಕಾರನ್ನು ಬಾಡಿಗೆಗೆ ಪಡೆದು ಆಗಸ್ಟ್ 3ರಂದು ಉದ್ಯೋಗ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದ ಶರಣ್ಯಾಳಿಗೆ ಹಾಸನದ ಹೊರ ವಲಯದ ಭುವನಹಳ್ಳಿ ಬಳಿ ಇರುವ ಸರ್ಕಲ್ ಬಳಿ ಢಿಕ್ಕಿ ಹೊಡೆದಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದ್ದಳು. ಬಳಿಕ ಸರಣಿ ಅಪಘಾತ ನಡೆಸಿ ಸರ್ಕಲ್ನ ಒಂದು ಮೂಲೆಗೆ ಕಾರು ಢಿಕ್ಕಿಯಾಗಿತ್ತು. ಕಾರಿನಲ್ಲಿದ್ದ ಮುಸುಕುಧಾರಿ ವ್ಯಕ್ತಿಯನ್ನು ನೋಡಿದ ಜನ ಅನುಮಾನಗೊಂಡು ಆತನನ್ನು ಹಿಡಿಯಲು ಮುಂದಾದಾಗ ಓಡಿ ತಪ್ಪಿಸಿಕೊಂಡಿದ್ದ.
ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಯುವತಿಗೆ ಬೇಕೆಂದೇ ಆತ ಢಿಕ್ಕಿ ಹೊಡೆದಿರುವ ವಿಚಾರ ಗೊತ್ತಾಗಿತ್ತು. ಭರತ್ ಕಾರಿನಿಂದ ಇಳಿದು ಪರಾರಿಯಾಗುವ ವೇಳೆ ಪರ್ಸ್, ಐಡಿ ಕಾರ್ಡ್ನ್ನು ಕಾರಿನಲ್ಲೇ ಬಿಟ್ಟಿದ್ದ. ಇದರ ಆಧಾರದ ಮೇಲೆ ಹಾಸನ ಬಡಾವಣೆ ಠಾಣೆ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.