ತಮಿಳುನಾಡು (ತಿರುವಣ್ಣಾಮಲೈ), ಆ 20 (DaijiworldNews/DB): ವೈವಿಧ್ಯ ಮಾದರಿಯ ಮದುವೆ ಆಮಂತ್ರಣ ಪತ್ರಿಕೆಗಳನ್ನು ವಿನ್ಯಾಸಗೊಳಿಸುವುದು ಸದ್ಯ ಟ್ರೆಂಡ್ ಆಗಿದೆ. ತಮಿಳುನಾಡಿನ ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಮದುವೆಯ ಮಾತ್ರೆ ಕವರ್ ಮಾದರಿಯ ವಿವಾಹ ಆಮಂತ್ರಣ ಪತ್ರಿಕೆ ಸದ್ಯ ಗಮನ ಸೆಳೆಯುತ್ತಿದೆ.
ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ತಮಿಳುನಾಡು ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್ ಹಾಗೂ ನರ್ಸ್ ಆಗಿರುವ ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ವಿವಾಹ ಇದೇ ಸೆಪ್ಟಂಬರ್ 5ರಂದು ನಡೆಯಲಿದೆ. ಇಬ್ಬರೂ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವುರಿಂದ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯನ್ನು ವೃತ್ತಿಯಾಧಾರಿತವಾಗಿಯೇ ವಿನ್ಯಾಸಗೊಳಿಸಿದ್ದಾರೆ. ಮಾತ್ರೆಯ ಕವರ್ ಮಾದರಿಯಲ್ಲಿ ವಿವಾಹ ಆಮಂತ್ರಣ ಪತ್ರಿಕೆಯಿದ್ದು, ಸದ್ಯ ಈ ಆಮಂತ್ರಣ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ಯಾಬ್ಲೆಟ್ ಕಾರ್ಡ್ನಲ್ಲಿರುವಂತೆ ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ, ಸಮಯ ಮುದ್ರಿಸಲಾಗಿದೆ. ಮ್ಯಾನುಫ್ಯಾಕ್ಚರ್ ಕಂಪೆನಿಯ ಹೆಸರಿರುವಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸವನ್ನು ಹಾಕಲಾಗಿದೆ.
ಟ್ಯಾಬ್ಲೆಟ್ ಕಾರ್ಡ್ಗಳಲ್ಲಿ ವಾರ್ನಿಂಗ್ ಸ್ಥಳ ಇರುವಂತೆ ಈ ಆಮಂತ್ರಣ ಪತ್ರಿಕೆಯಲ್ಲಿಯೂ ಇದ್ದು, ಕೆಂಪು ಬಣ್ಣದಲ್ಲಿ 'ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಿ ಎಂದು ಬರೆಯಲಾಗಿದೆ. ಇನ್ನು ಅದೇ ದಿನ ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದ್ದು, ಅದನ್ನೂ ಆಮಂತ್ರಣ ಪತ್ರಿಕೆಯಲ್ಲಿ ಅಚ್ಚೊತ್ತಲಾಗಿದೆ. ಮಾತ್ರೆಯ ಹೆಸರಿರುವ ಸ್ಥಳದಲ್ಲಿ ವಧು-ವರರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗಿರುವುದು ವಿಶೇಷ.