ಹಿಮಾಚಲ ಪ್ರದೇಶ, ಆ 20 (DaijiworldNews/DB): ಇಲ್ಲಿನ ಚಂಬಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಶನಿವಾರ ಬೆಳಗ್ಗೆ ಸಂಭವಿಸಿದ ಗುಡ್ಡ ಕುಸಿತದ ಪರಿಣಾಮ ಪಂಚಾಯತ್ ಅಧ್ಯಕ್ಷರೋರ್ವರ ಮನೆ ನೆಲಸಮಗೊಂಡು ಅವಶೇಷಗಳಡಿ ಸಿಲುಕಿ ಏಳು ಮಂದಿ ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶನಿವಾರ ಮುಂಜಾನೆ ಚಂಬಾ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಗೋಹರ್ ಉಪ ವಿಭಾಗದ ಕಶನ್ ಗ್ರಾಮ ಪಂಚಾಯತ್ ಜಾಡೋನ್ ಗ್ರಾಮದಲ್ಲಿ ಪಂಚಾಯತ್ ಅಧ್ಯಕ್ಷ ಖೇಮ್ ಸಿಂಗ್ ಅವರ ಮನೆ ಬಳಿ ಗುಡ್ಡ ಕುಸಿತ ಸಂಭವಿಸಿ ಎರಡಂತಸ್ತಿನ ಮನೆ ನೆಲಸಮವಾಗಿದೆ. ಮನೆಯಲ್ಲಿದ್ದ 7 ಮಂದಿ ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮಂಡಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತು, ವಾಹನಗಳಿಗೆ ಹಾನಿ ಉಂಟಾಗಿದೆ. ಬಾಲ್, ಸದರ್, ಥುನಾಗ್, ಮಂಡಿ ಮತ್ತು ಲಮಾಥಾಚ್ನಲ್ಲಿ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ಇಲ್ಲಿನ ನಿವಾಸಿಗಳು ತಮ್ಮ ತಮ್ಮ ಮನೆಗಳಲ್ಲೇ ಸಿಲುಕಿದ್ದು, ಹೊರ ಬರಲಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಆಗಸ್ಟ್ 25ರವರೆಗೆ ಭಾರೀ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಕಂಗ್ರಾ, ಚಂಬಾ, ಮಂಡಿ, ಕುಲು, ಶಿಮ್ಲಾ, ಸಿರ್ಮೌರ್, ಸೋಲನ್, ಹಮೀರ್ಪುರ್, ಉನಾ ಮತ್ತು ಬಿಲಾಸ್ಪುರ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.