ಶಿಮ್ಲಾ, ಆ 19 (DaijiworldNews/DB): ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ.
17-ಮೈಲ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಅಸುನೀಗಿದ್ದಾರೆ. ಉತ್ತರಪ್ರದೇಶದ ಲಲಿತ್ಪುರ ಮೂಲದ ರೋಹಿತ್ ಕೌಶಿಕ್ (23) ಮತ್ತು ಮಾನ್ಸಿ (23) ಮೃತಪಟ್ಟವರು.
ಜಿಲ್ಲೆಯ ಮಂಡಿಯ ಖುರಿ ಬಾಲ್ನಲ್ಲಿ ಶುಕ್ರವಾರ ಬೆಳಗ್ಗೆ ಡಸ್ಟರ್ ಕಾರೊಂದು ಕಮರಿಗೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ನರಕಂದ ನಿವಾಸಿ ಅಂಚಲಾ ಇಂದರ್ ನಾಥ್ ಮೃತಪಟ್ಟವರು. ಕಾರಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದು, ಅವರನ್ನು ನೆರ್ಚೋಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಮ್ಟಿ ಮೌಡ್, ತೆಹಸಿಲ್ ತುನಾಗ್, ಮಂಡಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಥುನಾಗ್ ತಹಸಿಲ್ನ ಚತ್ರಿ ಗ್ರಾಮದ ನಿವಾಸಿ ಜೈ ಪ್ರಕೇಶ್ ಮೃತ ವ್ಯಕ್ತಿ.
ಇನ್ನು ಧರ್ವಾ ರೋಹ್ನಾತ್ ಶಿಲ್ಲೈ ಲಿಂಕ್ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸ್ವಿಫ್ಟ್ ಕಾರು ಕಮರಿಗೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಲ್ಲಿದ್ದ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಶಿಲ್ಲೈ ಆಸ್ಪತ್ರೆಗೆ ದಾಖಲಿಸಲಾಗಿದೆ.