ಬೆಂಗಳೂರು, ಆ 19 (DaijiworldNews/DB): ಗುಪ್ತಚರ ಇಲಾಖೆ ಐಸಿಯುವಿನಲ್ಲಿದೆ, ಸರ್ಕಾರ ಸತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್, ಗೃಹಸಚಿವರು ಹೊತ್ತಿರುವ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪೋಷಣೆ ಮಾಡುವುದೋ? ಬಿಜೆಪಿ ಗೂಂಡಾಪಡೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಎಂದು ಪ್ರಶ್ನಿಸಿದೆ.
ಸಿದ್ಧರಾಮಯ್ಯ ಅವರು ಸಾಗುವ ದಾರಿಯಲ್ಲಿ ಹಾಗೂ ಅವರ ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಮಾಯಿಸಿದ್ದರೂ, ಮುನ್ಸೂಚನೆ ಇದ್ದರೂ ಪೊಲೀಸರು (ಅವರನ್ನು ವಶಕ್ಕೆ ಪಡೆಯದೆ ಅವರ ರಕ್ಷಣೆಗೇ ನಿಂತಿದ್ದರು. ಗೂಂಡಾಗಳಿಗೆ ರಕ್ಷಣೆ ನೀಡುವುದು ಸರ್ಕಾರದ ನಿರ್ದೇಶನವಾಗಿತ್ತೇ? ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ ಎಸ್ಪಿಯನ್ನು ಕೂಡಲೇ ಅಮಾನತುಗೊಳಿಸಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ.
ಸಿದ್ಧರಾಮಯ್ಯ ಅವರ ಮೇಲೆ ದಾಳಿ ಮಾಡಿದ ಗೂಂಡಾಗಳನ್ನು ಬಂಧಿಸಲಾಗಿದ್ದರೂ, ರಾತ್ರೋರಾತ್ರಿ ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಬಂದಿದ್ದಾರೆ. ಅರಗ ಜ್ಞಾನೇಂದ್ರ ಅವರೇ, ದಾಳಿಕೋರರ ಮೇಲೆ ಗಂಭೀರ ಪ್ರಕರಣ ದಾಖಲಿಸದಿರುವುದೇಕೆ? ಇದು ಸರ್ಕಾರಿ ಪ್ರಾಯೋಜಿತ ಕೃತ್ಯವಲ್ಲವೇ? ಇದು ವಿಪಕ್ಷ ನಾಯಕರ ಪ್ರಾಣ ಹಾನಿಯ ಪ್ರಯತ್ನ ಎಂದೇ ಭಾವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದೆ.