ಮಹಾರಾಷ್ಟ್ರ, ಆ 19 (DaijiworldNews/DB): ನಾಲ್ಕು ಅಂತಸ್ತಿನ ಕಟ್ಟಡವೊಂದು ನೋಡನೋಡುತ್ತಿದ್ದಂತೆಯೇ ಕುಸಿದು ಬಿದ್ದ ಘಟನೆ ಮುಂಬೈನ ಬೊರಿವಲಿಯಲ್ಲಿ ಶುಕ್ರವಾರ ನಡೆದಿದೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ನಗರ ಭಾಗದಲ್ಲೇ ಕಟ್ಟಡವಿದ್ದು, ಸಾಕಷ್ಟು ಜನನಿಬಿಡ ಪ್ರದೇಶವೂ ಆಗಿದೆ. ಎಂದಿನಂತೆ ಈ ಕಟ್ಟಡದ ಬಳಿ ಜನರ ಓಡಾಟ ಇಂದೂ ಇತ್ತು. ಈ ವೇಳೆ ಜನರು ನೋಡ ನೋಡುತ್ತಿದ್ದಂತೆಯೇ ನಾಲ್ಕಂತಸ್ತಿನ ಕಟ್ಟಡ ಒಮ್ಮೆಲೇ ಕುಸಿದು ಬಿದ್ದಿದೆ. ಕಟ್ಟಡ ಕುಸಿತದ ದೃಶ್ಯ ವೀಡಿಯೋಗಳಲ್ಲಿ ಸೆರೆಯಾಗಿದೆ. ಕಟ್ಟಡದ ಒಳಗೆ ಜನರಿದ್ದರೇ ಎಂಬುದು ತಿಳಿದು ಬಂದಿಲ್ಲ. ಆದರೆ ಜನನಿಬಿಡ ಪ್ರದೇಶವಾಗಿರುವುದರಿಂದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಅಗ್ನಿಶಾಮಕ ದಳವು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್ಗಳು ಮತ್ತು ಮೂರು ಆಂಬುಲೆನ್ಸ್ಗಳು ಸ್ಥಳದಲ್ಲಿವೆ.