ಬೆಂಗಳೂರು, ಆ 19(DaijiworldNews/HR): ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ಸೇರಿ ಪುತ್ರನನ್ನು ಕೊಂದು ಬಳಿಕ ಡೆತ್ನೋಟ್ ಬರೆದಿಟ್ಟು ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಹೇಶ್ ಕುಮಾರ್ (44), ಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು ಮಗ ನಂದೀಶ್ಗೌಡ (9)ಗೆ ವಿಷ ಕುಡಿಸಿ ಕೊಂದಿದ್ದಾರೆ.
ಮಹೇಶ್ ಕುಮಾರ್ ಬಿಬಿಎಂಪಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, ಜ್ಯೋತಿ ಕೂಡ ಮನೆ ಸಮೀಪದಲ್ಲಿಯೇ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮಹೇಶ್ಗೆ ಕೆಲ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಅಲ್ಲದೆ ಎರಡು ತಿಂಗಳ ಹಿಂದೆ ಹೊಟ್ಟೆ ನೋವು ತೀವ್ರಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದಾಗ, ಪರೀಕ್ಷಿಸಿದ ವೈದ್ಯರು, ಕ್ಯಾನ್ಸರ್ ಇರುವುದಾಗಿ ಹೇಳಿದ್ದರು.
ಇನ್ನು ಇದರಿಂದಾಗಿ ಮಾನಸಿಕವಾಗಿ ನೊಂದಿದ್ದ ರಮೇಶ್ ಕುಮಾರ್, ಆರ್ಥಿಕವಾಗಿಯೂ ಕಷ್ಟದಲ್ಲಿದ್ದರು. ಹೀಗಾಗಿ ತಾನು ಸತ್ತ ನಂತರ ತನ್ನ ಪತ್ನಿ, ಮಗ ಅನಾಥರಾಗುತ್ತಾರೆ ಎಂದು ಭಾವಿಸಿ ಗುರುವಾರ ಮೂವರು ಸಾಮೂಹಿಕವಾಗಿ ಸಾಯಲು ಪತ್ನಿಗೆ ಮನವೊಲಿಸಿದ್ದಾರೆ.
ಮೊದಲಿಗೆ ಜ್ಯೋತಿ ಪುತ್ರ ನಂದಿಶ್ಗೌಡಗೆ ವಿಷ ಕುಡಿಸಿ, ನಂತರ ಜ್ಯೋತಿ ಅದೇ ಕೋಣೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ರಮೇಶ್ ಕುಮಾರ್ ಮತ್ತೂಂದು ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ ಕುಮಾರ್ ಅವರು ಗುರುವಾರ ಬೆಳಗ್ಗೆಯಿಂದ ಮನೆಯಿಂದ ಹೊರಗಡೆ ಬಾರದಿದ್ದರಿಂದ ಅನುಮಾನಗೊಂಡ ಸ್ಥಳೀಯರು ಮನೆ ಬಾಗಿಲು ತಟ್ಟಿದ್ದರೂ ಸ್ಪಂದನೆ ಇರಲಿಲ್ಲ. ಬಳಿಕ ಪೊಲೀಸ್ ಸಹಾಯವಾಣಿಗೆ 112ಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಈ ವೇಳೆ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಕ್ಯಾನ್ಸರ್ ರೋಗವಿದ್ದು, ಅದನ್ನು ಗುಣಪಡಿಸಿಕೊಳ್ಳಲು ಬೇಕಾದಷ್ಟು ಹಣವಿಲ್ಲ. ಒಂದು ವೇಳೆ ತಾನೂ ಸತ್ತರೆ, ತನ್ನ ಹೆಂಡತಿ, ಮಗ ಅನಾಥರಾಗುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಬರೆದಿದ್ದಾರೆ.