ಬಹರಾಯಿಚ್, ಆ 19 (DaijiworldNews/DB): ಮಾಸಿಕ ಶುಲ್ಕ ಕಟ್ಟಿಲ್ಲವೆಂಬ ಕಾರಣಕ್ಕೆ ಶಿಕ್ಷಕನಿಂದ ಗಂಭೀರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಹರಾಯಿಚ್ನಲ್ಲಿ ಶುಕ್ರವಾರ ನಡೆದಿದೆ.
13 ವರ್ಷದ ಬಾಲಕನಿಗೆ ಮಾಸಿಕ ಶುಲ್ಕ ನೀಡಿಲ್ಲವೆಂಬ ಕಾರಣಕ್ಕೆ ಶಿಕ್ಷಕ ತೀವ್ರವಾಗಿ ಹಲ್ಲೆ ನಡೆಸಿದ್ದ. ಇದರಿಂದ ಬಾಲಕನಿಗೆ ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿ ಕಳೆದ 9 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಅಸುನೀಗಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮೃತ ಬಾಲಕನ ಅಣ್ಣ ರಾಜೇಶ್ ವಿಶ್ವಕರ್ಮ, 250 ರೂ. ಮಾಸಿಕ ಶುಲ್ಕ ನೀಡಿಲ್ಲವೆಂದು ಶಿಕ್ಷಕ ತಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ನಾನು ಆ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿದ್ದು, ಈ ವಿಚಾರ ಶಿಕ್ಷಕನಿಗೆ ತಿಳಿದಿರಲಿಲ್ಲ. ನನ್ನ ತಮ್ಮನನ್ನು ಅಮಾನುಷವಾಗಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮೃತ ಬಾಲಕನ ಚಿಕ್ಕಪ್ಪ ಸಿರ್ಸಿಯಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಶ್ರಾವಸ್ತಿ ಎಸ್ಪಿ ಅರವಿಂದ್ ಕೆ. ಮೌರ್ಯ ತಿಳಿಸಿದ್ದಾರೆ.
ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಕಳೆದ ವಾರ ರಾಜಸ್ಥಾನದಲ್ಲಿ ಶಿಕ್ಷಕನಿಂದ ಹಲ್ಲೆಗೊಳಗಾಗಿ ಒಂಬತ್ತು ವರ್ಷದ ದಲಿತ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ.