ನವದೆಹಲಿ, ಆ 19 (DaijiworldNews/DB): ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಶುಕ್ರವಾರ ಮುಂಜಾವು ಸಿಬಿಐ ಅಧಿಕಾರಿಗಳು ಸಿಸೋಡಿಯಾ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ದೆಹಲಿ ನಿವಾಸ ಸೇರಿದಂತೆ ಏಳು ರಾಜ್ಯಗಳಲ್ಲಿರುವ ಸಿಸೋಡಿಯಾಗೆ ಸೇರಿದ 21 ಸ್ಥಳಗಳಲ್ಲಿ ಇದೇ ವೇಳೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಸಿಬಿಐ ಅಧಿಕಾರಿಗಳ ದಾಳಿ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿಸೋಡಿಯಾ, ಸಿಬಿಐ ಅಧಿಕಾರಿಗಳ ತಂಡವನ್ನು ನಾವು ಸ್ವಾಗತಿಸುತ್ತೇವೆ. ಅವರ ಕಾರ್ಯಾಚರಣೆ ಸಂಬಂಧಿಸಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನನ್ನ ವಿರುದ್ದ ಈವರೆಗೆ ಹಲವು ಪ್ರಕರಣಗಳು ದಾಖಲಾಗಿತ್ತು. ಆದರೆ ಯಾವುದೇ ಪ್ರಕರಣಗಳೂ ಸಾಬೀತಾಗಿಲ್ಲ. ಈ ತನಿಖೆಯಿಂದ ಕೂಡಾ ಏನೂ ಸಂಭವಿಸದುವುದಿಲ್ಲ. ದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನಾನು ಮಾಡುವ ಒಳ್ಳೆಯ ಕೆಲಸವನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು. ಸತ್ಯ ಶೀಘ್ರ ಹೊರ ಬರುವ ಸಲುವಾಗಿ ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೆಹಲಿ ಸರ್ಕಾರ ಅತ್ಯುತ್ತಮ ಕೆಲಸಗಳನ್ನು ಮಾಡಿದೆ. ಇದರಿಂದ ಕೆಲವರಿಗೆ ಚಿಂತೆ ಶುರುವಾಗಿದೆ. ಉತ್ತಮ ಕೆಲಸ ಮಾಡುವವರಿಗೆ ಕಿರುಕುಳ ನೀಡುವುದು ಖೇದಕರ. ಭಾರತ ನಂ. ನಂ.1 ಆಗದಿರಲು ಇದೇ ಕಾರಣ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ.