ಬೆಂಗಳೂರು, ಆ 19(DaijiworldNews/HR): ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ಜನರ ಮೂಲಕವೇ ಸಾಧಕರನ್ನು ಆಯ್ಕೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಈ ವರ್ಷ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿವೆ. ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಅಂಗವಾಗಿ ನಡೆಯುತ್ತಿರುವ ನಾಟಕ ಪ್ರದರ್ಶನವನ್ನು ಡಿಸೆಂಬರ್ವರೆಗೂ ನಡೆಸುವ ಚಿಂತನೆ ಇದೆ ಎಂದರು.
ಇನ್ನು ಮಳೆಗಾಲದ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೂ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಸೆಪ್ಟಂಬರ್ನಲ್ಲಿ ಅಧಿವೇಶನ ನಡೆಯಲಿದ್ದು, ಬ್ಯಾಂಕ್ವೆಟ್ ಹಾಲ್ನಲ್ಲಿ ನಾಟಕ ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.