ಬೆಂಗಳೂರು, ಆ 18 (DaijiworldNews/MS):ʻರಾಯಚೂರನ್ನು ತೆಲಂಗಾಣದದಲ್ಲಿ ವಿಲೀನ ಮಾಡಲು ಅಲ್ಲಿನ ಜನ ಬಯಸಿದ್ದಾರೆʼ ಎಂಬ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಯಚೂರಿನ ಜನರು ತಮ್ಮ ಕಲ್ಯಾಣ ಯೋಜನೆಗಳನ್ನು ಕಂಡು ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ಸಿಎಂ ಕೆಸಿಆರ್ ಅವರು ಹೇಳಿಕೆ ನೀಡಿ 24 ಗಂಟೆಗಳು ಕಳೆದಿವೆ. ಈ ಹೇಳಿಕೆಯ ಬಗ್ಗೆ ನಿಮ್ಮಿಂದ ಅಥವಾ ಸರ್ಕಾರದ ಯಾರೊಬ್ಬರಿಂದಲೂ ಒಂದೇ ಒಂದು ಹೇಳಿಕೆ ಬರದಿರುವುದು ನನಗೆ ನಿರಾಶೆ ತಂದಿದೆ’ ಪ್ರಿಯಾಂಕ್ ಖರ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಮಲತಾಯಿ ಧೋರಣೆ ಏಕೆ? ಒಂದು ವೇಳೆ ಬೆಳಗಾವಿ ಗಡಿ ಸಮಸ್ಯೆಯಾಗಿದ್ದರೆ ಇಡೀ ಸಚಿವ ಸಂಪುಟವೇ ರಕ್ಷಣೆಗೆ ಮುಂದಾಗುತ್ತಿತ್ತು. ಆದರೆ, ನಮ್ಮ ವಿಚಾರದಲ್ಲಿ ಯಾಕಿಲ್ಲ? ಬಿಜೆಪಿ ಸರ್ಕಾರ ನಮ್ಮನ್ನು ಕರ್ನಾಟಕದ ಭಾಗವೆಂದು ಪರಿಗಣಿಸುತ್ತದೆಯೋ ಅಥವಾ ಇಲ್ಲವೋ? ತೆಲಂಗಾಣದಲ್ಲಿ ವಿಲೀನ ಮಾಡಲು ಸೂಚಿಸಿದ ನಿಮ್ಮ ಶಾಸಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ಮುಖ್ಯಮಂತ್ರಿಯಾಗಲಿ, ಬಿಜೆಪಿ ಅಧ್ಯಕ್ಷರಾಗಲಿ ಇಂತಹ ಹೇಳಿಕೆಗಾಗಿ ಶಾಸಕರನ್ನು ಏಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ? ನಿಮ್ಮ ನಿಷ್ಕ್ರಿಯತೆಯಿಂದಾಗಿ ತೆಲಂಗಾಣ ಸಿಎಂ ಧೈರ್ಯದಿಂದ ರಾಯಚೂರಿನ ಮೇಲೆ ಹಕ್ಕು ಚಲಾಸುವಂತಾಗಿದೆ. ಇದನ್ನು ಒಪ್ಪಲಾಗದು. ರಾಯಚೂರು ಕರ್ನಾಟಕಕ್ಕೆ ಸೇರಿದ್ದು, ಕರ್ನಾಟಕದಲ್ಲೇ ಉಳಿಯಲಿದೆ’ ಎಂದು ಪ್ರಿಯಾಂಕ್ ಹೇಳಿದ್ದಾರೆ.
ʻರಾಯಚೂರು ಬೇಡವಾಗಿದ್ದರೆ ತೆಲಂಗಾಣಕ್ಕೆ ಸೇರಿಸಿಬಿಡಿʼ ಎಂದು ಈ ಹಿಂದೆ ಹೇಳಿದ್ದ ರಾಯಚೂರು ಬಿಜೆಪಿ ಶಾಸಕ ಶಿವರಾಜ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಪ್ರಿಯಾಂಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.