ಕೋಲ್ಕತಾ, ಆ 18 (DaijiworldNews/DB): ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಮುಂದಿನ ಆರು ತಿಂಗಳ ಕಾಲ ಆಡಳಿತ ನಡೆಸುವುದೂ ಅನುಮಾನ ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಹೊಸ ಮತ್ತು ಸುಧಾರಿತ ಟಿಎಂಸಿಯು ಮುಂದಿನ ಆರು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂಬ ಟಿಎಂಸಿಯ ಹೇಳಿಕೆಯುಳ್ಳ ಪೋಸ್ಟರ್ ಬಿಡುಗಡೆಯ ಕುರಿತು ಪೂರ್ವ ಮಿಡ್ನಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದೆ. ಟಿಎಂಸಿ ಮುಂದೆ ಆಡಳಿತ ನಡೆಸಲಾಗದು. ಡಿಸೆಂಬರ್ ಆ ಪಕ್ಷಕ್ಕೆ ಡೆಡ್ಲೈನ್ ಆಗಿದೆ ಎಂದು ಎಂದರು.
ಟಿಎಂಸಿ ಮುಖಂಡರ ಮೇಲಿನ ಇಡಿ ದಾಳಿಯನ್ನು ಇದೇ ವೇಳೆ ಅವರು ಉಲ್ಲೇಖಿಸಿದರು. ಈಗಾಗಲೇ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿದೆ. ಮಮತಾ ಬ್ಯಾನರ್ಜಿ ಅವರ ಆಪ್ತರಾದ ಅನುಬ್ರಾತಾ ಮಂಡಲ್ ಅವರನ್ನೂ ಬಂಧಿಸಲಾಗಿದ್ದು, ಆಗಸ್ಟ್ 20ರವರೆಗೂ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ.