ಮಂಡ್ಯ, ಆ 18 (DaijiworldNews/DB): ಸ್ವಾತಂತ್ರೋತ್ಸವದದ ಮುನ್ನಾದಿನ ಸಂಸದೆ ಸುಮಲತಾ ಅಂಬರೀಶ್ ಅವರು ಕೃಷ್ಣರಾಜಸಾಗರ ಜಲಾಶಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಮಾಡಿಸಿಕೊಂಡಿರುವುದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಜನಸಾಮಾನ್ಯರಿಗಿಲ್ಲದ ಅವಕಾಶ ಜನಪ್ರತಿನಿಧಿಗಳಿಗೆ ಯಾಕೆ ಎಂಬುದಾಗಿ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟಿನ ಮೇಲೆ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಸದೆ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಕೃಷ್ಣರಾಜ ಜಲಾಶಯದ ಮೇಲ್ಭಾಗಕ್ಕೆ ಜನಸಾಮಾನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಸಂಸದೆ ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ಜಲಾಶಯದಲ್ಲಿ ಬಾಗಿನ ಅರ್ಪಿಸಿದ್ದಾರೆ. ಬಳಿಕ ಅಲ್ಲೇ ರಾಷ್ಟ್ರಧ್ವಜವನ್ನು ಹಿಡಿದು ಬೆಂಬಲಿಗರೊಂದಿಗೆ ಗುಂಪಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಜನರಿಗೊಂದು, ಜನಪ್ರತಿನಿಧಿಗಳಿಗೊಂದು ನ್ಯಾಯ ಕಲ್ಪಿಸುವುದು ಸರಿಯಲ್ಲ. ಅಧಿಕಾರಿಗಳು ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆಂಬುದಾಗಿ ವರದಿಯಾಗಿದೆ.
ಕಳೆದ ವರ್ಷ ಅಣೆಕಟ್ಟು ಪರಿಶೀಲನೆಗೆ ಬಂದಿದ್ದ ಸಂಸದೆ ಸುಮಲತಾ ತಮ್ಮ ಫೇಸ್ಬುಕ್ನಲ್ಲಿ ಪರಿಶೀಲನೆಯನ್ನು ಲೈವ್ ಮಾಡಿಸಿದ್ದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಬಾರಿಯೂ ಅವರ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ.