ಬೆಂಗಳೂರು, ಆ 18 (DaijiworldNews/DB): ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಆಸೆ ನನನಗೂ ಇದೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದ ಸಮಾಜ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಹೇಳಿಕೆ ಕುರಿತು ವಿವರಣೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸೂಚಿಸಿದ್ದಾರೆ.
ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಶ್ರೀರಾಮುಲು ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಿದ್ದು, ತಮ್ಮ ಹೇಳಿಕೆಯ ನಿಜಾರ್ಥವನ್ನು ವಿವರಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಹೇಳಿಕೆಯನ್ನು ನೀಡಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ನಡುವೆ ನಡೆಯುತ್ತಿರುವ ಜಗಳದಿಂದಾಗಿ ಮುಂದೊಂದು ದಿನ ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬರಲಿ ಎಂಬರ್ಥದಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನನ್ನ ಹೇಳಿಕೆ ಕುರಿತಂತೆ ರಾಜ್ಯಾಧ್ಯಕ್ಷರಿಗೆ ಈಗಾಗಲೇ ಎಲ್ಲಾ ಸ್ಪಷ್ಟನೆ ನೀಡಲಾಗಿದೆ. ಮೋದಿಯವರನ್ನು ವಿರೋಧಿಸಿದ್ದವರೂ ಈಗ ಬಿಜೆಪಿಗೆ ಬಂಧಿದ್ದಾರೆ. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದು, ಕಾಂಗ್ರೆಸ್ನಲ್ಲಿ ಕಿರಿಕಿರಿಯೇ ಹೆಚ್ಚುತ್ತಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಿದ್ದರಾಮಯ್ಯ ಮುಂದೊಂದು ದಿನ ಬಿಜೆಪಿಗೆ ಬರುತ್ತಾರೆಂಬ ಅರ್ಥದಲ್ಲಿ ನಾನು ಮಾತನಾಡಿದೆ ಎಂದರು.
ನಾನು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಹೋಗಲು ಸ್ವಲ್ಪ ವಿಳಂಬವಾದ ಕಾರಣ ಅಲ್ಲಿ ಸಿದ್ದರಾಮಯ್ಯ ಗೆದ್ದರು. ಯಾವುದಕ್ಕೂ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದವರು ಪ್ರತಿಕ್ರಿಯಿಸಿದರು.
ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.