ಬೆಂಗಳೂರು, ಆ 18 (DaijiworldNews/DB): ನಿಗದಿತ ಸಮಯಕ್ಕೆ ಶಾಲೆಗೆ ಬಾರದಿರುವ ಮತ್ತು ಕೆಲಸಕ್ಕೆ ಆಗಾಗ ಗೈರು ಹಾಜರಾಗುವ ಶಿಕ್ಷಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಆಯುಕ್ತರಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಕೆಲವು ಶಿಕ್ಷಕರು ಶಾಲೆಗೆ ನಿಗದಿತ ಸಮಯಕ್ಕೆ ಬಾರದಿರುವುದು ಮತ್ತು ಪದೇ ಪದೇ ಗೈರು ಹಾಜರಾಗುತ್ತಿರುವ ಕುರಿತು ಗೊತ್ತಾಗಿದೆ. ಅಂತಹವರ ವಿರುದ್ದ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.
ಕೆಲವು ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬಾರದ ಕಾರಣ ಮಕ್ಕಳು ಶಿಕ್ಷಕರಿಗಾಗಿ ಕಾದು ಕುಳಿತಿರುವುದು ನನ್ನ ಗಮನಕ್ಕೆ ಬಂದಿದೆ. ಪದೇ ಪದೇ ಗೈರು ಹಾಜರಾಗುವುದರಿಂದ ಮಕ್ಕಳ ಶೈಕ್ಷಣಿಕ ವೇಳಾಪಟ್ಟಿ, ಶೈಕ್ಷಣಿಕ ಬದುಕಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಈ ಸೂಚನೆಯನ್ನು ಪಾಲಿಸುವುದು ಕಡ್ಡಾಯ. ಮುಂದೆ ಅಂತಹ ಲೋಪಗಳು ಕಂಡು ಬಂದಲ್ಲಿ ಅಂತಹ ಶಿಕ್ಷಕರ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.