ಪಾಟ್ನಾ, ಆ 18 (DaijiworldNews/DB): ಬಿಹಾರದ ಪಾಟ್ನಾದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ತರಕಾರಿ ವ್ಯಾಪಾರಿಯೊಬ್ಬರ ಮಗಳಾಗಿರುವ 15 ವರ್ಷದ ವಿದ್ಯಾರ್ಥಿನಿ ಇಂದು ಮುಂಜಾನೆ ಶಾಲೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಯು ಆಕೆಯ ಕುತ್ತಿಗೆಗೆ ಗುಂಡು ಹೊಡೆದಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಇದೊಂದು ಪ್ರೇಮ ಪ್ರಕರಣವಾಗಿದ್ದು, ಇದರಿಂದಾಗಿಯೇ ಘಟನೆ ನಡೆದಿದೆ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ.