ನವದೆಹಲಿ, ಆ 18 (DaijiworldNews/MS):ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ನಿವಾಸದಲ್ಲಿ ಭದ್ರತಾ ಲೋಪ ಉಂಟಾದ ಪರಿಣಾಮ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯ ಮೂವರು ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಭದ್ರತಾ ಉಲ್ಲಂಘನೆಯ ಘಟನೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, ಎನ್ಎಸ್ಎ ದೋವಲ್ನ ವಿಐಪಿ ಭದ್ರತೆಗೆ ಸಂಬಂಧಿಸಿದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (DIG) ಮತ್ತು ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯನ್ನೂ ಸರ್ಕಾರ ವರ್ಗಾವಣೆ ಮಾಡಿದೆ.
2022 ರ ಫೆ.16 ರಂದು ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಅಜಿತ್ ದೋವಲ್ ಅವರ ನಿವಾಸದ ಆವರಣವನ್ನು ಪ್ರವೇಶಿಸಲು ಪ್ರಯತ್ನಿಸಿದ್ದು, ಭದ್ರತಾ ಉಲ್ಲಂಘನೆಯಾಗಿತ್ತು. ಈ ವೇಳೆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದು, ನಂತರ ದೆಹಲಿ ಪೊಲೀಸರು ಬಂಧಿಸಿದ್ದರು.
ವ್ಯಕ್ತಿ ಚಲಾಯಿಸುತ್ತಿದ್ದ ಕೆಂಪು ಬಣ್ಣದ ಎಸ್ ಯು ಎ ದೋವಲ್ರ ಹೈ-ಸೆಕ್ಯುರಿಟಿ ಸೆಂಟ್ರಲ್ ದೆಹಲಿ ನಿವಾಸದ ಗೇಟ್ ಮೂಲಕ ಪ್ರವೇಶಿಸಲು ಪ್ರಯತ್ನಿಸಿದೆ ಎಂದು ಮೂಲಗಳು ತಿಳಿಸಿವೆ. ಎನ್ಎಸ್ಎ ದೋವಲ್ ಅವರ ಮನೆಯನ್ನು ಕಾವಲು ಕಾಯುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಕಾರನ್ನು ತಡೆದು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಶಂತನು ರೆಡ್ಡಿ ಎಂದು ಗುರುತಿಸಲಾದ ವ್ಯಕ್ತಿ, ತನ್ನ ದೇಹದಲ್ಲಿ ಚಿಪ್ ಇದೆ. ಅದನ್ನು ಬಾಹ್ಯವಾಗಿ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದ. ಆದರೆ, ಎಂಆರ್ಐ ಸ್ಕ್ಯಾನ್ನಲ್ಲಿ ಯಾವುದೇ ಚಿಪ್ ಪತ್ತೆಯಾಗಲಿಲ್ಲ. ಈ ವ್ಯಕ್ತಿ ಬೆಂಗಳೂರಿನವನಾಗಿದ್ದು, ಮಾನಸಿಕವಾಗಿ ಅಸ್ಥಿರನಾಗಿದ್ದ. ಕಾರನ್ನು ನೋಯ್ಡಾದಿಂದ ಬಾಡಿಗೆಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.