ಬೆಂಗಳೂರು, ಆ 17 (DaijiworldNews/DB): ಡಾ. ರಾಜ್ಕುಮಾರ್ ಕುಟುಂಬಸ್ಥರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಅವರ ರೇಸ್ಕೋರ್ಸ್ ನಿವಾಸದಲ್ಲಿ ಭೇಟಿಯಾಗಿ ಕಂಠೀರವ ಸ್ಟುಡಿಯೋ ಜಾಗದಲ್ಲಿ ತಮ್ಮ ಕುಟುಂಬದ ಮೂವರ ಸಮಾಧಿಗಳು ಇರುವುದರಿಂದ ಅವುಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆ.
ಡಾ. ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳು ಕಂಠೀರವ ಸ್ಟುಡಿಯೋದ ಒಂದೇ ಭಾಗದಲ್ಲಿವೆ. ಡಾ. ರಾಜ್ ಸ್ಮಾರಕ ಸಂಬಂಧ ಹಲವು ಅಭಿವೃದ್ದಿ ಕೆಲಸಗಳು ಈಗಾಗಲೇ ನಡೆದಿದ್ದು, ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಲು ಡಾ. ರಾಜ್ ಕುಟುಂಬ ಯೋಜನೆ ಸಿದ್ದಪಡಿಸಿದೆ. ಹೀಗಾಗಿ ಈ ಅಭಿವೃದ್ದಿ ಕಾರ್ಯದ ವಿಚಾರವಾಗಿ ಸಿಎಂ ಬೊಮ್ಮಾಯಿಯವರೊಂದಿಗೆ ಚರ್ಚೆ ನಡೆಸಿದರು.
ಡಾ.ರಾಜ್ ಪುತ್ರ ನಟ, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ ಮತ್ತು ನಟ ಯುವ ರಾಜಕುಮಾರ್ ಮತ್ತಿತರರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಭಿವೃದ್ದಿ ಯೋಜನೆ ಕುರಿತಂತೆ ಡಾ. ರಾಜ್ ಕುಟುಂಬ ಸಿದ್ದಪಡಿಸಿದ ಪಿಪಿಟಿಯನ್ನು ಮುಖ್ಯಮಂತ್ರಿಯವರು ವೀಕ್ಷಣೆ ಮಾಡಿದರು. ಬಳಿಕ ಯೋಜನೆಯ ಅಂದಾಜು ಮೊತ್ತವನ್ನು ಪಿಡಬ್ಲೂಡಿ ಇಲಾಖೆಯಿಂದ ತರಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.