ಬೆಂಗಳೂರು, ಆ 17 (DaijiworldNews/DB): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಮತ್ತು 11 ಸದಸ್ಯರನ್ನೊಳಗೊಂಡ ಕೇಂದ್ರ ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ ಬೆನ್ನಲ್ಲೇ ಬಿಎಸ್ವೈ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಸಿಸಿ ಬುಧವಾರ ಮಾತನಾಡಿದರು.
ನಾನು ನಿರೀಕ್ಷಿಸದ ಸ್ಥಾನವನ್ನು ನೀಡುವ ಮೂಲಕ ನನಗೆ ಕೇಂದ್ರ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಇದರಿಂದ ನನಗೆ ಆನೆ ಬಲ ಬಂದಂತಾಗಿದ್ದು, ಬದಲಾವಣೆ ಗಾಳಿ ಹೇಗೆ ಬೀಸಲಿದೆ ಎಂಬುದನ್ನು ಕಾದು ನೋಡಿ. ರಾಜ್ಯಾದ್ಯಂತ ಸಾಮೂಹಿಕ ನಾಯಕತ್ವದೊಂದಿಗೆ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಬಿಎಸ್ವೈ ಇದೇ ವೇಳೆ ತಿಳಿಸಿದರು.
ನನಗೆ ಮಹತ್ವದ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ನನಗೆ ಹೈಕಮಾಂಡ್ ಯಾವುದೇ ಕೊರತೆ ಮಾಡದೆ ಎಲ್ಲಾ ಸ್ಥಾನಮಾನಗಳನ್ನು ನೀಡಿದೆ. ಪಕ್ಷ ಬೆಳೆಸುವ ಶಕ್ತಿಯನ್ನು ನನಗೆ ನೀಡಿದ್ದು, ಕೈಕಾಲು ಗಟ್ಟಿ ಇರುವವರೆಗೆ ಪ್ರಾಮಾಣಿಕವಾಗಿ ಇದಕ್ಕೆ ಶ್ರಮಿಸುತ್ತೇನೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಆಗಿಯೇ ಬಿಟ್ಟೆ ಎಂಬ ಭ್ರಮೆಯಲ್ಲಿ ಕೆಲವರಿದ್ದಾರೆ. ಆದರೆ ಅವರು ಸಿಎಂ ಆಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಾವು ಬಿಡುವುದಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಬಿಎಸ್ವೈ ಟಾಂಗ್ ನೀಡಿದರು.