ಕೋಝಿಕ್ಕೋಡ್, ಆ 17 (DaijiworldNews/DB): ಮಹಿಳೆ ಲೈಂಗಿಕ ಪ್ರಚೋದನಾಕಾರಿ ಬಟ್ಟೆಗಳನ್ನು ಧರಿಸಿದರೆ ಮೇಲ್ನೋಟಕ್ಕೆ ಆಕರ್ಷಿತವಾಗುವುದಿಲ್ಲ. ಇಂತ ಧಿರಿಸು ಧರಿಸಿದ್ದರೆ ಲೈಂಗಿಕ ಕಿರುಕುಳ ದೂರನ್ನು ಪರಿಗಣಿಸಲು ಆಗುವುದಿಲ್ಲ ಎಂದು ಕೋಝಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಪ್ರಕರಣವೊಂದರ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ 74 ವರ್ಷದ ಸಿವಿಕ್ ಚಂದ್ರನ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ಆರೋಪಿ ಪರ ವಕೀಲರು ಅರ್ಜಿಯೊಂದಿಗೆ ದೂರುದಾರ ಮಹಿಳೆಯ ಪ್ರಚೋದನಾಕಾರಿ ಚಿತ್ರಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ದೂರುದಾರರು ಸ್ವತಃ ಲೈಂಗಿಕ ಪ್ರಚೋದನಾಕಾರಿ ಬಟ್ಟೆಗಳನ್ನು ಧರಿಸಿರುವುದನ್ನು ಮೂಲ ಛಾಯಾಚಿತ್ರಗಳು ತೋರಿಸುತ್ತವೆ. ಹೀಗಾಗಿ ಪ್ರಾಥಮಿಕ ಸೆಕ್ಷನ್ 354A ಯು ಆರೋಪಿಗಳ ವಿರುದ್ದ ಪರಿಣಾಮಕಾರಿಯಾಗುವುದಿಲ್ಲ ಎಂದು ತಿಳಿಸಿದೆ. ಅಲ್ಲದೆ, ಆರೋಪಿಯು ವಿಕಲಚೇತನ ವ್ಯಕ್ತಿಯಾಗಿರುವುದರಿಂದ ದೂರದಾರ ಮಹಿಳೆಯನ್ನು ಬಲವಂತವಾಗಿ ತನ್ನ ಮಡಿಲಲ್ಲಿಟ್ಟುಕೊಂಡು ಅಶ್ಲೀಲ ಕೃತ್ಯ ಎಸಗುವುದು ಅಸಾಧ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಬಳಿಕ ಆತನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಯುವ ಮಹಿಳಾ ಲೇಖಕಿಯಾಗಿರುವ ದೂರುದಾರ ಮಹಿಳೆಯ ಮೇಲೆ ಆರೋಪಿಯು ಮೌಖಿಕ ಮತ್ತು ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ನಂದಿ ಬೀಚ್ನಲ್ಲಿ 2020 ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಶಿಬಿರದಲ್ಲಿ ಆಕೆಯ ಮರ್ಯಾದೆ ತೆಗೆಯಲು ಯತ್ನಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A(2), 341 ಮತ್ತು 354 ಅಡಿಯಲ್ಲಿ ಆರೋಪಿಗಳ ವಿರುದ್ದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ವೇಳೆ ಆರೋಪಿಗಳ ಪರ ನ್ಯಾಯವಾದಿಗಳಾದ ಪಿ.ಹರಿ ಮತ್ತು ಸುಷ್ಮಾ ಎಂ ವಾದ ಮಂಡಿಸಿದ್ದರು. ಈ ಪ್ರಕರಣ ಸತ್ಯಕ್ಕೆ ದೂರವಾಗಿದೆ. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸುಖಾ ಸುಮ್ಮನೆ ಶತ್ರುತ್ವದಿಂದಾಗಿ ದೂರು ದಾಖಲು ಮಾಡಲಾಗಿದೆ ಎಂದು ವಾದಿಸಿದ್ದರು. ಅಲ್ಲದೆ ಘಟನೆ ನಡೆದು ಆರು ತಿಂಗಳಾದ ಬಳಿಕ ದೂರು ದಾಖಲಿಸಲಾಗಿದೆ. ದೂರು ದಾಖಲು ಮಾಡಲು ವಿಳಂಬ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಪ್ರಾಸಿಕ್ಯೂಶನ್ ಸ್ಪಷ್ಟನೆ ನೀಡಬೇಕೆಂದು ವಾದ ಮಂಡಿಸಲಾಯಿತು. ಘಟನೆ ನಡೆದಿದೆ ಎನ್ನಲಾದ ದಿನದಂದು ಆ ಸ್ಥಳದಲ್ಲಿ ದೂರುದಾರೆ ಮತ್ತು ಆಕೆಯ ಪ್ರಿಯಕರ ಇದ್ದರು. ಅಲ್ಲದೆ, ಅನೇಕ ಮಂದಿ ಅಲ್ಲಿದ್ದರು. ಆದರೆ ಯಾವುದೇ ದೂರುಗಳನ್ನು ಅವರ್ಯಾರೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಇದಕ್ಕೆ ಸಂಬಂಧಿಸಿ ದೂರುದಾರರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಫೋಟೋಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.