ಬೆಂಗಳೂರು, ಆ 17 (DaijiworldNews/DB): ನಿಜವಾದ ವಯಸ್ಸು ಮುಚ್ಚಿಟ್ಟು ಮದುವೆಯಾದ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಪತಿ ಕೊಲೆಗೈದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಬಿಹಾರ ಮೂಲದ, ಪುಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿರುವ ಪೃಥ್ವಿರಾಜ್ ಕೊಲೆಗೈದ ಪತಿ. ಆತನ ಪತ್ನಿ ಜ್ಯೋತಿಕುಮಾರಿ ಹತ್ಯೆಯಾದಾಕೆ. ಒಂಬತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ವಿವಾಹದ ಸಂದರ್ಭದಲ್ಲಿ ಜ್ಯೋತಿ ತನ್ನ ವಯಸ್ಸು 28 ಎಂದು ಹೇಳಿಕೊಂಡಿದ್ದು, ಆಗ ಪೃಥ್ವಿರಾಜ್ಗೆ 30 ವರ್ಷ ವಯಸ್ಸಾಗಿತ್ತು. ಆದರೆ ಕೆಲ ತಿಂಗಳ ಬಳಿಕ ಪತ್ನಿಯ ನಿಜವಾದ ವಯಸ್ಸು 38 ಎಂದು ಪತಿ ಪೃಥ್ವಿರಾಜ್ಗೆ ಗೊತ್ತಾಗಿದೆ. ಆ ಬಳಿಕ ಪ್ರತಿದಿನ ಇಬ್ಬರ ನಡುವೆ ಜಗಳ ಶುರುವಾಗಿತ್ತು. ನಿಜವಾದ ವಯಸ್ಸು ಮುಚ್ಚಿಟ್ಟು ಮದುವೆಯಾದ ಪತ್ನಿಯನ್ನು ಮುಗಿಸಬೇಕೆಂದು ಸಂಚು ರೂಪಿಸಿದ್ದ ಆತ ಸ್ನೇಹಿತ ಸಮೀರ್ ಎಂಬಾತನನನ್ನು ಕಾರು ಚಾಲಕ ಎಂದು ಪರಿಚಯಿಸಿ ಪತ್ನಿಯನ್ನು ಮಲ್ಪೆ, ಸಕಲೇಶಪುರ ಮುಂತಾದೆಡೆ ಪ್ರವಾಸಕ್ಕೆ ಕರೆದೊಯ್ದಿದ್ದ. ಮಲ್ಪೆಯಲ್ಲಿ ಸಮುದ್ರದಲ್ಲಿ ಮುಳುಗಿಸಿ ಆಕೆಯನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ. ಆದರೆ ಮಳೆ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಕಲೇಶಪುರಕ್ಕೆ ಕರೆ ತಂದು ಸೀನರಿ ನೋಡಲೆಂದು ಕಾಡಿನೊಳಗೊಯ್ದು ವೇಲ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಶವವನ್ನು ಅಲ್ಲೇ ಪೊದೆಯೊಳಗೆ ಬಿಸಾಕಿ ಬಂದಿದ್ದಾನೆ.
ಬೆಂಗಳೂರಿಗೆ ಬಂದ ಕೂಡಲೇ ಪತ್ನಿ ನಾಪತ್ತೆಯಾಗಿದ್ದಾಳೆಂದು ಆಗಸ್ಟ್ 3ರಂದು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಜ್ಯೋತಿ ಬದುಕಿಲ್ಲವೆಂಬುದು ಸ್ಪಷ್ಟವಾಗಿತ್ತು.
ಕೊಲೆ ಮಾಡುವುದಕ್ಕೂ ಮುನ್ನ ತನ್ನ ಮೊಬೈಲ್ನ್ನು ಮನೆಯಲ್ಲೇ ಬಿಟ್ಟು ಪ್ರವಾಸಕ್ಕೆ ತೆರಳಿದ್ದ ಬಗ್ಗೆ ಪೊಲೀಸರೆದುರು ಹೇಳಿಕೊಂಡಿದ್ದ. ಈ ವೇಳೆ ಆತನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಮೊಬೈಲ್ನಲ್ಲಿ ಇಬ್ಬರ ಗಲಾಟೆಯ ವಿಚಾರಗಳು ದಾಖಲಾಗಿದ್ದು, ಆತನೇ ಕೊಲೆಗೈದಿರುವುದಕ್ಕೆ ಹೆಚ್ಚಿನ ಸಾಕ್ಷಿ ಲಭಿಸಿದಂತಾಗಿದೆ. ಸದ್ಯ ಜ್ಯೋತಿಯ ಪತಿ ಪೃಥ್ವಿರಾಜ್ ಹಾಗೂ ಆತನಿಗೆ ಸಹಕರಿಸಿದ ಆರೋಪದಲ್ಲಿ ಗೆಳೆಯ ಸಮೀರ್ನನ್ನು ಪೊಲೀಸರು ಬಂಧಿಸಿದ್ದಾರೆ.