ಲಕ್ನೋ, ಆ 17 (DaijiworldNews/DB): ಬರೋಬ್ಬರಿ 17 ಲಕ್ಷ ರೂ. ಮೌಲ್ಯದ ಕ್ಯಾಡ್ಬರಿ ಕಂಪನಿಯ ಚಾಕೋಲೇಟ್ ಇದ್ದ ಸುಮಾರು 150 ಬಾಕ್ಸ್ ಗಳನ್ನು ಅಪರಿಚಿತರು ಕದ್ದೊಯ್ದ ಘಟನೆ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ನಡೆದಿದೆ.
ಗೋಡೌನ್ನಿಂದಲೇ ಚಾಕೋಲೇಟ್ ಕಳ್ಳತನವಾಗಿದೆ. ಗೋಡೌನ್ ಹಿಂದೆ ಕ್ಯಾಡ್ಬರಿ ವಿತರಕ ರಾಜೇಂದ್ರ ಸಿಂಗ್ ಸಿಧು ಅವರ ಮನೆ ಇತ್ತು. ಆದರೆ ಇತ್ತೀಚೆಗಷ್ಟೇ ಅವರು ಅಲ್ಲಿಂದ ಗೋಮತಿ ನಗರದ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಂಡಿದ್ದು, ಹಳೆಯ ಮನೆಯಲ್ಲಿ ಚಾಕೋಲೇಟ್ಗಳನ್ನು ಸಂಗ್ರಹಿಸಿಟ್ಟಿದ್ದರು. ಕಳವಾದ ದಿನ ನೆರೆಹೊರೆಯವರು ಕರೆ ಮಾಡಿ ಮನೆ ಬಾಗಿಲು ಮುರಿದಿರುವುದನ್ನು ತಿಳಿಸಿದ್ದು, ಅಲ್ಲಿಗೆ ಹೋಗಿ ನೋಡಿದಾಗ ಚಾಕೋಲೇಟ್ ಬಾಕ್ಸ್ಗಳು ಕಳವಾಗಿರುವುದು ಗೊತ್ತಾಗಿತ್ತು. ಸಿಸಿ ಕ್ಯಾಮರಾಗಳನ್ನೂ ಕಳ್ಳರು ಚಾಕೋಲೇಟ್ ಬಾಕ್ಸ್ಗಳೊಂದಿಗೆ ಹೊತ್ತೊಯ್ದಿದ್ದಾರೆ. ಕೂಡಲೇ ಈ ಕುರಿತು ಚಿನ್ಹತ್ ಪೊಲೀಸ್ ಠಾಣೆಯಲ್ಲಿ ಸಿಧು ಅವರು ದೂರು ದಾಖಲಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಪಿಕಪ್ ಟ್ರಕ್ವೊಂದರ ಸದ್ದು ಕೇಳಿ ಬಂದಿತ್ತು ಎಂದು ನೆರೆಹೊರೆಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಈ ಆಧಾರದಲ್ಲಿ ಚಾಕೋಲೇಟ್ ಸಾಗಿಸಲು ಟ್ರಕ್ ಬಳಸಿರಬಹುದು ಎಂಬುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಗರದ ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಲು ಈ ಚಾಕೋಲೇಟ್ಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.