ಬೆಂಗಳೂರು, ಆ 16 (DaijiworldNews/MS): ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿಎಂಬುದಾಗಿ ಕಾಂಗ್ರೆಸ್ ಪಕ್ಷವೂ ಬಿಜೆಪಿಗೆ ಪಂಥಾಹ್ವಾನ ನೀಡಿದೆ.
ಕಾಂಗ್ರೆಸ್ ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ ಸುರೇಶ್ ಗೌಡ, ಸ್ಟ್ರಾಂಗ್ ಗೃಹಸಚಿವರು ಬೇಕು ಎನ್ನುತ್ತಾರೆ ಯತ್ನಾಳ್, ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ, ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಬಿಜೆಪಿ ಎಂಬುದಾಗಿ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್ ರೇಣುಕಾಚಾರ್ಯ vs ಕೆ.ಸುಧಾಕರ್ ಸೋಮಶೇಖರ್ vs ಮಾಧುಸ್ವಾಮಿ ಮುನಿರತ್ನ vs ಮಾಧುಸ್ವಾಮಿ ಅಶೋಕ್ vs ಅಶ್ವಥ್ ನಾರಾಯಣ್ ಭಗವಂತ್ ಖೂಬಾ vs ಶರಣು ಸಲಗರ ಕಾರ್ಯಕರ್ತರು vs ಬಿಜೆಪಿ ಅರಗ ಜ್ಞಾನೇಂದ್ರ vs ಯತ್ನಾಳ್ BSY vs ಸಂತೋಷ್ ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?! ಎಂದು ಪ್ರಶ್ನಿಸಿದೆ.
40% ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ. ಸಚಿವ ಎಸ್ ಟಿ ಸೋಮಶೇಖರ್ ಅವರೇ, ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ? ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ? ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ? ಅದರಲ್ಲೂ 40% ಕಮಿಷನ್ ಇತ್ತೇ? ಎಂದು ಕೇಳಿದೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯೂ ಕಾಂಗ್ರೆಸ್ ಒಳಮನೆಯಲ್ಲಿ ನೂರಾರು ರಂದ್ರ ಎಂದು ವ್ಯಂಗ್ಯವಾಡಿದೆ.
ಹೈಕಮಾಂಡ್ ವಿರುದ್ಧ #G23 ಮುಖಂಡರು ಸದಾ ದಂಗೆ ಏಳುತ್ತಿದ್ದರೂ ಎದುರಿಸಲಾಗದ ಕಾಂಗ್ರೆಸ್ ಹಡಗು ರಾಷ್ಟ್ರಮಟ್ಟದಲ್ಲೇ ಮುಳುಗಿ ಹೋಗುತ್ತಿದೆ.ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಸದಾ ಚಾಲ್ತಿಯಲ್ಲಿರಲು ಕಾಂಗ್ರೆಸ್ ಲೆಕ್ಕ ಹಾಕಿದೆ. ಆದರೆ ಒಂದೇ ತಿಂಗಳಲ್ಲಿ ಮೂವರು ನಾಯಕರು ಒಬ್ಬರ ಮೇಲೊಬ್ಬರು ಪೈಪೋಟಿಗೆ ಬಿದ್ದವರಂತೆ ಉತ್ಸವ, ನಡಿಗೆ ಹಾಗೂ ಪ್ರಚಾರ ಯಾತ್ರೆ ಆರಂಭಿಸಿದ್ದಾರೆ.ಮೊದಲು ಮನೆಯ ಜಗಳ ಬಗೆಹರಿಸಿಕೊಳ್ಳಿ, ನಂತರ ಜಗತ್ತಿನ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಲೇವಡಿ ಮಾಡಿದೆ.