ಶ್ರೀನಗರ, ಆ 17 (DaijiworldNews/DB): ಕಾಶ್ಮೀರ ಪಂಡಿತ್ ಸುನೀಲ್ ಕುಮಾರ್ ಭಟ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರ ಮನೆ ಜಪ್ತಿ ಮಾಡಲು ಜಮ್ಮು-ಕಾಶ್ಮೀರ ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಛೋಟಿಪುರದಲ್ಲಿ ತಮ್ಮ ಸೇಬಿನ ತೋಟದಲ್ಲಿ ಕೆಲಸ ನಿರತರಾಗಿದ್ದ ಕಾಶ್ಮೀರ ಪಂಡಿತ್ ಸುನೀಲ್ ಕುಮಾರ್ ಭಟ್ ಅವರನ್ನು ಅದಿಲ್ ವಾನಿ ಸಹಿತ ಉಗ್ರರು ಕಳೆದ ಕೆಲ ದಿನಗಳ ಹಿಂದೆ ಗುಂಡಿಕ್ಕಿ ಹತ್ಯೆಗೈದಿದ್ದ. ಅಲ್ಲದೆ ಘಟನೆಯಲ್ಲಿ ಅವರ ಸಹೋದರ ಪಿಂಟು ಕುಮಾರ್ ಭಟ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧಪಟ್ಟಂತೆ ಜಮ್ಮು ಕಾಶ್ಮೀರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಉಗ್ರ ಅದಿಲ್ ವಾನಿಯ ಮನೆಯನ್ನು ಜಪ್ತಿ ಮಾಡಲು ಮುಂದಾಗಿದೆ. ಇದೀಗ ಜಪ್ತಿ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿರುವುದಾಗಿ ವರದಿಗಳು ತಿಳಿಸಿವೆ.
ಈ ಧಾಳಿಗೆ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಧಾಳಿ ನಂತರ ವಾನಿ ಕುಟಾಪೋರಾ ಪ್ರದೇಶದ ಮನೆಯಲ್ಲಿ ಆಶ್ರಯ ಪಡೆದಿದ್ದ. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಎಸೆದು ಆತ ಪರಾರಿಯಾಗಿದ್ದ. ಇದೀಗ ಆಸ್ತಿ ಮುಟ್ಟುಗೋಲು ಹಾಕಲು ಸರ್ಕಾರ ಆರಂಭಿಸಿದ್ದು, ಈ ನಡುವೆ ಉಗ್ರ ವಾನಿಯ ತಂದೆ ಮತ್ತು ಆತನ ಮೂವರು ಸಹೋದರರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.