ಘಾಜಿಯಾಬಾದ್, ಆ 17 (DaijiworldNews/DB): ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾನೀಯದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ನೀಡಿ ಯುವತಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ ಘಟನೆ ಗಾಜಿಯಾಬಾದ್ ಜಿಲ್ಲೆಯ ಮೋದಿ ನಗರದಲ್ಲಿ ನಡೆದಿದೆ.
19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಆರೋಪಿಗಳನ್ನು ಶೇಖರ್, ಕೃಷ್ಣ ಮತ್ತು ಅರ್ಜುನ್ ಎಂದು ಗುರುತಿಸಲಾಗಿದೆ. ಯುವತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಾನೀಯದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿ ಯಾರೋ ಆಕೆಗೆ ನೀಡಿದ್ದಾರೆ. ಬಳಿಕ ಆಕೆಯನ್ನು ವ್ಯಕ್ತಿಯೊಬ್ಬ ಕೋಣೆಗೆ ಕರೆದೊಯ್ದಿದ್ದು, ಬಳಿಕ ತನ್ನ ಸ್ನೇಹಿತರನ್ನೂ ಕರೆಸಿಕೊಂಡಿದ್ದಾನೆ. ಬಳಿಕ ಮೂವರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಯುವತಿಗೆ ಪ್ರಜ್ಞೆ ಬಂದಿದ್ದು, ಕೃತ್ಯವನ್ನು ವಿರೋಧಿಸಿದ್ದಾಳೆ. ಈ ವೇಳೆ ಮೂವರೂ ಸೇರಿ ಆಕೆಯನ್ನು ಥಳಿಸಿದ್ದಲ್ಲದೆ, ವಿಷಯ ಹೊರಗೆ ತಿಳಿಸಿದರೆ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ಬಳಿಕ ಮೂವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಸಂತ್ರಸ್ತ ಯುವತಿ ಮನೆಯಲ್ಲಿ ವಿಷಯ ತಿಳಿಸಿದ್ದು, ಸೋಮವಾರ ತಂದೆಯೊಂದಿಗೆ ತೆರಳಿ ಮೋದಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈ ವೇಳೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಇರಾಜ್ ರಾಜಾ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.