ಬೆಂಗಳೂರು, ಆ 17 (DaijiworldNews/DB): ಪ್ರಭಾವಿ ರಾಜಕಾರಣಿಯೊಬ್ಬರ ಅಳಿಯ ಆ್ಯಂಬುಲೆನ್ಸ್ ಸೈರೆನ್ನ್ನು ಕಾರಿಗೆ ಅಳವಡಿಸಿಕೊಂಡು ನಗರದಲ್ಲಿ ಅಡ್ಡಾಡಿ ಪುಂಡಾಟ ಮೆರೆದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದ್ದು, ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಅಳಿಯ ರಾಜೀವ್ ರಾಥೋಡ್ ಎಂಬಾತನೇ ಕಾರಿಗೆ ಸೈರೆನ್ ಅಳವಡಿಸಿಕೊಂಡು ಅಡ್ಡಾಡಿದ ಯುವಕ. ಈತ ಸ್ಯಾಂಡಲ್ವುಡ್ ನಟ ಕೂಡಾ ಆಗಿದ್ದು, ತನ್ನ ಕೆಎ51 ಎಂಜಿ 9299 ನಂಬರಿನ ಆಡಿ ಕ್ಯೂ 7 ಕಾರಿನಲ್ಲಿ ಆ್ಯಂಬುಲೆನ್ಸ್ ಸೈರನ್ ಹಾಕಿಕೊಂಡು ವಿಜಯನಗರದಲ್ಲಿ ತನ್ನಿಷ್ಟದಂತೆ ಅಡ್ಡಾಡಿದ್ದಾರೆ. ಅಲ್ಲದೆ ಇತರ ಚಾಲಕರು, ಪ್ರಯಾಣಿಕರಿಗೆ ಇದರಿಂದ ಸಮಸ್ಯೆ ಉಂಟಾಗಿದೆ.
ಇದನ್ನು ಗಮನಿಸಿದ ವಿಜಯನಗರ ಸಂಚಾರಿ ಪೊಲೀಸರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ರಾಥೋಡ್ನನ್ನು ಪ್ರಶ್ನಿಸಿ ದಂಡ ವಸೂಲಿ ಮಾಡಿದ್ದಾರೆ. ಅಲ್ಲದೆ ಮುಂದೆ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.