ಕೋಲಾರ, ಆ 17 (DaijioworldNews/HR): ಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ದಂಪತಿ ಮೃತಪಟ್ಟು, 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ವಿಜಯವಾಡ ಮೂಲದ ಷರೀಫ್ ಹಾಗೂ ಮೈಮುನ್ನಿಸಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬಸ್ ಪಲ್ಟಿಯಾದ ತಕ್ಷಣ ಬಸ್ ನ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದು, ಬಸ್ ನಲ್ಲಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.