ಭುಜ್, ಆ 16 (DaijiworldNews/SM): ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾಗುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಅಲ್ಲದೆ, ಖಾಸಗಿ ಶಾಲೆಗಳ ಆಡಿಟಿಂಗ್ ಮಾಡಲಾಗುವುದು ಎಂದು ಮಂಗಳವಾರ ಭರವಸೆ ನೀಡಿದ್ದಾರೆ.
ಪ್ರಸ್ತುತ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದಾಗಿ ಮತ್ತು ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಶಾಲೆಗಳನ್ನು ತೆರೆಯುವುದಾಗಿ ಎಎಪಿ ಸಂಚಾಲಕರು ಭರವಸೆ ನೀಡಿದ್ದಾರೆ.
"ಗುಜರಾತ್ನಲ್ಲಿ ಜನಿಸಿದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ನಾವು ಯಾರನ್ನೂ ಒತ್ತಾಯಿಸುವುದಿಲ್ಲ. ಪೋಷಕರು ತಮ್ಮ ಬಳಿ ಹಣವಿದ್ದರೆ ಅವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಬಹುದು. ಆದರೆ ಅವರ ಬಳಿ ಹಣವಿಲ್ಲದಿದ್ದರೆ ಹಣದ ಕೊರತೆಯಾಗಲು ನಾವು ಬಿಡುವುದಿಲ್ಲ. ಅವರ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ಉಚಿತವಾಗಿ ನೀಡುತ್ತೇವೆ ಎಂದು ಇಲ್ಲಿ ಟೌನ್ ಹಾಲ್ ಸಭೆಯಲ್ಲಿ ದೆಹಲಿ ಸಿಎಂ ಹೇಳಿದ್ದಾರೆ.
ಗುಜರಾತ್ನಲ್ಲಿ ಎಎಪಿ ಮುಂದಿನ ಸರ್ಕಾರವನ್ನು ರಚಿಸಿದರೆ, ಎಲ್ಲಾ ಖಾಸಗಿ ಶಾಲೆಗಳನ್ನು ಆಡಿಟ್ ಮಾಡಲಾಗುವುದು ಮತ್ತು ತಮ್ಮ ಪಕ್ಷ ಅಧಿಕಾರದಲ್ಲಿರುವ ದೆಹಲಿಯಲ್ಲಿ ಮಾಡಿದಂತೆ ಹೆಚ್ಚುವರಿ ಹಣವನ್ನು ಪೋಷಕರಿಗೆ ಮರಳಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.