ನವದೆಹಲಿ, ಆ 16 (DaijiworldNews/DB): ಮನೆಯೊಂದರಲ್ಲಿ ಅತ್ತೆ ಮತ್ತು ಸೊಸೆಯನ್ನು ದುಷ್ಕರ್ಮಿಗಳು ಹತ್ಯೆಗೈದ ಘಟನೆ ದೆಹಲಿಯ ಶಾಹದಾರ ಪ್ರದೇಶದದಲ್ಲಿ ನಡೆದಿದೆ.
ಶಹದಾರದ ಸುಭಾಷ್ ಪಾರ್ಕ್ ಪ್ರದೇಶದ ನಿವಾಸಿಗಳಾದ ವಿಮಲಾ ದೇವಿ ( 70 ) ಮತ್ತು ಅವರ ಸೊಸೆ ಡೋಲಿ ರೈ (45 ) ಹತ್ಯೆಯಾದವರು. ವಿಮಲಾ ದೇವಿಯ ಮಕ್ಕಳಾದ ಸಾರ್ಥಕ್ ರೈ ಮತ್ತು ಶಶಾಂಕ್ ರೈ ಇಬ್ಬರೂ ದೆಹಲಿಯಿಂದ ಹೊರಗಿದ್ದಾಗ ಕೊಲೆ ನಡೆದಿದೆ ಎನ್ನಲಾಗಿದೆ.
ಹೊರ ಹೋಗಿದ್ದ ಮೊಮ್ಮಕ್ಕಳು ಮನೆಗೆ ಹಿಂತಿರುಗಿದಾಗ ಮನೆಗೆ ಬೀಗ ಹಾಕಲಾಗಿತ್ತು. ಹೀಗಾಗಿ ತಮ್ಮೊಂದಿಗಿದ್ದ ಇನ್ನೊಂದು ಕೀ ಮೂಲಕ ಬಾಗಿಲು ತೆರೆದು ನೋಡಿದಾಗ ಸಾಕುನಾಯಿ ಮನೆಯ ಮೂಲೆಯಲ್ಲಿ ಕಟ್ಟಿ ಹಾಕಲ್ಪಟ್ಟಿತ್ತು. ತಾಯಿ ಮತ್ತು ಅಜ್ಜಿ ರಕ್ತದ ಮಡುವಿನಲ್ಲಿ ನೆಲದಲ್ಲಿ ಬಿದ್ದಿದ್ದರು. ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ದೋಚಿ ದುಷ್ಕರ್ಮಿಗಳು ನಾಪತ್ತೆಯಾಗಿದ್ದಾರೆ. ಮಂಗಳವಾರ ಮುಂಜಾವು 4.20ರ ಸುಮಾರಿಗೆ ಠಾಣೆಗೆ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಚೂರಿ ಇರಿದಿರುವುದು ಗೊತ್ತಾಗಿದೆ. ದೂರು ದಾಖಲಿಸಿಕೊಳ್ಳಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.