ಬೆಂಗಳೂರು, ಆ 16 (DaijiworldNews/DB): ಕಾಂಗ್ರೆಸ್ನ ಮತಗಳು ವಿಭಜನೆಯಾಗುತ್ತವೆ ಎಂಬ ಕಾರಣಕ್ಕೆ ಎಸ್ಡಿಪಿಐಯನ್ನು ನಿಷೇಧಿಸಲು ಬಿಜೆಪಿ ಪ್ರಯತ್ನಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಜೆಪಿಯವರ ಪ್ರಚೋದನಕಾರಿ ಹೇಳಿಕೆಗಳೇ ಕಾರಣ. ಎಸ್ಡಿಪಿಐಯನ್ನು ನಿಷೇಧ ಮಾಡಲು ಒತ್ತಾಯಗಳಿದ್ದರೂ, ಆ ಪ್ರಯತ್ನಕ್ಕೆ ಬಿಜೆಪಿಗರು ಕೈ ಹಾಕುವುದಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಸ್ವತಃ ಬಿಜೆಪಿಯರೇ ಎಸ್ಡಿಪಿಐ ನಿಷೇಧಕ್ಕೆ ಒತ್ತಾಯಿಸಿದ್ದರು. ಆದರೆ ಎಸ್ಡಿಪಿಐ ಅಸ್ತಿತ್ವದಲ್ಲಿದ್ದರೆ ಕಾಂಗ್ರೆಸ್ನ ಮತ ವಿಭಜನೆಯಾಗುತ್ತವೆ ಎಂಬ ಕಾರಣಕ್ಕೆ ಅವರು ನಿಷೇಧದ ಗೋಜಿಗೆ ಹೋಗುವುದಿಲ್ಲ ಎಂದರು.
ಎಸ್ಡಿಪಿಐ, ಪಿಎಫ್ಐನಂತಹ ಸಂಘಟನೆಗಳು ಅಸ್ತಿತ್ವದಲ್ಲಿದ್ದರೆ ಬಿಜೆಪಿಗೆ ರಾಜಕೀಯವಾಗಿ ಲಾಭವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ ಎಂದವರು ಆಪಾದಿಸಿದರು.
ಸರ್ಕಾರ ಕಾನೂನು ಬಿಗುಗೊಳಿಸಿ ದಕ್ಷ ಅಧಿಕಾರಿಗಳನ್ನು ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ ಮಾಡುವುದರೊಂದಿಗೆ ಅವರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದರೆ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದವರು ತಿಳಿಸಿದರು.
ಹಲಾಲ್ ಕಟ್, ಹಿಜಾಬ್ ವಿವಾದಗಳು ಹೆಚ್ಚಾದಾಗ ಪರಿಸ್ಥಿತಿಯನ್ನು ಸರ್ಕಾರ ನಿಯಂತ್ರಿಸಲಿಲ್ಲ. ಗಲಭೆ ಎಬ್ಬಿಸುವವರು ಯಾರೇ ಆದರೂ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು. ಪದೇ ಪದೇ ಹೀಗಾಗುವುದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇದರಿಂದ ಬಂಡವಾಳ ಹೂಡಿಕೆ, ಆಡಳಿತ, ಕಾನೂನು ಸುವ್ಯವಸ್ಥೆ ಎಲ್ಲದಕ್ಕೂ ತೊಡಕಾಗುತ್ತದೆ. ನಿಷ್ಪಕ್ಷಪಾತವಾಗಿ ಸರ್ಕಾರ ವರ್ತಿಸಿದ್ದಲ್ಲಿ ಇದನ್ನೆಲ್ಲ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದವರು ಇದೇ ವೇಳೆ ಅಭಿಪ್ರಾಯಿಸಿದರು.