ಬೆಂಗಳೂರು, ಆ 16 (DaijiworldNews/DB): ಕ್ರೀಡಾಪಟುಗಳಿಗೆ ಅರಣ್ಯ, ಪೊಲೀಸ್ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಶೇ. 2ರಷ್ಟು ಮೀಸಲಾತಿಯನ್ನು ಇತರೇ ಇಲಾಖೆಗಳಿಗೂ ವಿಸ್ತರಣೆ ಮಾಡುವ ಸಂಬಂಧ ಕಡತವನ್ನು ಅನುಮೋದನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬರ್ಮಿಂಗ್ ಹ್ಯಾಂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರವ 75 ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದ ಅವರು, ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಅಗತ್ಯ. ದೇಶಕ್ಕಾಗಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜಿಸುತ್ತಿದೆ. ಹೀಗಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿರುವ ಮೀಸಲಾತಿಯನ್ನು ಇತರೇ ಇಲಾಖೆಗಳಿಗೂ ವಿಸ್ತರಣೆ ಮಾಡಲಾಗುವುದು ಎಂದರು.
ಕ್ರೀಡಾದತ್ತು ಯೋಜನೆ ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿದೆ. ಕ್ರೀಡಾಂಗಣಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಗ್ರಾಮ್ಯ ಪ್ರತಿಭೆಗಳನ್ನು ಗುರುತಿಸಲು ಮುಂದಿನ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟಗಳನ್ನೂ ಪ್ರಾರಂಭ ಮಾಡಲಾಗುವುದು. ಸರ್ಕಾರ ಎಂದೆಂದೂ ಕ್ರೀಡಾಪಟುಗಳ ಜೊತೆಗಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ ಸಾಧಕ ಕ್ರೀಡಾಪಟುಗಳು ರಾಜ್ಯದಲ್ಲಿದ್ದಾರೆ. ಏಶಿಯ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ಗಳಲ್ಲಿ ಹೆಸರು ಮಾಡಿದವರು, ಬಾಸ್ಕೆಟ್ ಬಾಲ್, ಹಾಕಿ ಮುಂತಾದ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ನಮ್ಮ ರಾಜ್ಯದವರು ಎನ್ನಲು ಹೆಮ್ಮೆಯಾಗುತ್ತದೆ. ಈ ಸಾಧನೆ ಇತರರಿಗೂ ಸ್ಪೂರ್ತಿ. ರಾಜ್ಯದ ಕ್ರೀಡಾಪಟುಗಳ ಸಾಮರ್ಥ್ಯದ ಮೇಲೆ ವಿಶ್ವಾಸ, ನಂಬಿಕೆ ಸದಾ ಇದೆ. ಪ್ರೋತ್ಸಾಹದಿಂದ ಉತ್ತಮ ಫಲಿತಾಂಶ ಸಾಧ್ಯ ಎಂಬ ಕಾರಣದಿಂದ 75 ಜನರ ಕ್ರೀಡಾ ದತ್ತು ಯೋಜನೆಯನ್ನು ರೂಪಿಸಲಾಯಿತು ಎಂದವರು ಇದೇ ವೇಳೆ ಹೇಳಿದರು.