ಬೆಂಗಳೂರು, ಆ 16 (DaijiworldNews/MS): ಸರ್ಕಾರ ನಡೀತಾ ಇಲ್ಲ. ಇಲ್ಲಿ, ಮ್ಯಾನೇಜ್ ಮಾಡ್ತಾ ಇದ್ದೀವಿ ಅಷ್ಟೇ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ವೈರಲ್ ಆಡಿಯೋ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು , ಮಾಧುಸ್ವಾಮಿ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈ ಕುರಿತು ನಾನು ಸಚಿವ ಮಾಧುಸ್ವಾಮಿ ಅವರೊಂದಿಗೆ ಮಾಡಿದ್ದೇನೆ. ಯಾವುದೋ ಬೇರೆ ಸಂದರ್ಭದಲ್ಲಿ ತಾವು ಈ ರೀತಿ ಹೇಳಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಮಾಧುಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.
ಮೂರು ತಿಂಗಳ ಹಿಂದೆ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದರಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿದ್ದರು. ಅದನ್ನೇ ಮುಂದಿಟ್ಟುಕೊಂಡು ಸರ್ಕಾರದ ವರ್ಚಸ್ಸು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.
ಸರ್ಕಾರದ ಮಟ್ಟದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಇಲಾಖೆಯೊಂದರ ಕಾರ್ಯವೈಖರಿ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದನ್ನೇ ದೊಡ್ಡದು ಮಾಡಿ ಸರ್ಕಾರ ಅಪಾಯದಲ್ಲಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದರು.