ಬಿಜ್ನೋರ್(ಉತ್ತರ ಪ್ರದೇಶ), ಆ 16 (DaijiworldNews/DB): ರಾಷ್ಟ್ರಧ್ವಜವನ್ನು ಮನೆಮನೆಗೆ ಹಂಚಿದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಪತಿಗೆ ಶಿರಚ್ಛೇದನ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆಯ ಮನೆಯ ಹೊರಗೆ ಈ ಬೆದರಿಕೆ ಪತ್ರವನ್ನು ಅಂಟಿಸಲಾಗಿದ್ದು, ಕುಟುಂಬಿಕರು ಆತಂಕಗೊಂಡಿದ್ದಾರೆ. ಬಳಿಕ ಅಂಗನವಾಡಿ ಕಾರ್ಯಕರ್ತೆ ಶಶಿಬಾಲಾ ಅವರ ಪತಿ ಅರುಣ್ಕುಮಾರ್ ಕಶ್ಯಪ್ ಪೊಲೀಸರಿಗೆ ದೂರು ನೀಡಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಅಪರಿಚಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮನೆಗೆ ಭದ್ರತೆ ಒದಗಿಸಲಾಗಿದೆ ನಗರ ಎಸ್ಪಿ ಪ್ರವೀಣ್ ರಂಜನ್ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಕರಪತ್ರದಲ್ಲಿರುವ ಅಕ್ಷರ ಗಮನಿಸಿದರೆ ಬೆದರಿಕೆ ಹಾಕಿದಾತ ವಿದ್ಯಾವಂತನಲ್ಲ ಎಂಬುದು ಗೊತ್ತಾಗುತ್ತಿದೆ. ಸಿಸಿಕ್ಯಾಮರಾ ಪರಿಶೀಲನೆ ಹಾಗೂ ಸ್ಥಳೀಯರ ವಿಚಾರಣೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
'ಹರ್ ಘರ್ ತಿರಂಗ' ಅಭಿಯಾನದ ಅಂಗವಾಗಿ ಆಗಸ್ಟ್ 13ರಿಂದ 14ರವರೆಗೆ ಶಶಿಬಾಲಾ ಅವರು ಮನೆಮನೆಗೆ ತಿರಂಗಾ ಹಂಚಿದ್ದರು. ಆಗಸ್ಟ್ 15ರಂದು ಅವರ ಮನೆಯ ಹೊರಗೆ ಬೆದರಿಕೆ ಪತ್ರ ಅಂಟಿಸಿರುವುದು ಪತ್ತೆಯಾಗಿದೆ.
ಪತ್ರದಲ್ಲಿ ’ಅರುಣ್, ನೀವು ಮನೆಮನೆಗೆ ತ್ರಿವರ್ಣ ಧ್ವಜ ಹಂಚುತ್ತಿರುವುದು ಗೊತ್ತಾಗಿದೆ. ಹೀಗೆ ಮಾಡಿದರೆ ನಿಮ್ಮ ತಲೆಯನ್ನು ದೇಹದಿಂದ ಕತ್ತರಿಸಿ ಬೇರ್ಪಡಿಸಲಾಗುವುದು ಎಂದು ಬರೆಯಲಾಗಿದ್ದು, ಕೆಳಭಾಗದಲ್ಲಿ ಐಎಸ್ಐ ಬೆಂಬಲಿಗ ಎಂದು ನಮೂದಿಸಲಾಗಿದೆ. ಅಲ್ಲದೆ ಮನೆ ಮುಂಭಾಗದ ಅಂಗಡಿ ಹಾಗೂ ಫಾಸ್ಟ್ಫುಡ್ ಕಾರ್ಟ್ನಲ್ಲಿಯೂ ಇದೇ ರೀತಿಯ ಪತ್ರ ಅಂಟಿಸಿರುವುದು ಕಂಡು ಬಂದಿತ್ತು ಎನ್ನಲಾಗಿದೆ.