ಬೆಂಗಳೂರು, ಆ 16 (DaijiworldNews/DB): ದೇವನಹಳ್ಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಮುಂದಿನ ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶ ದೇವನಹಳ್ಳಿ. 54 ಪೇಟೆಗಳು, 340ಕ್ಕೂ ಅಧಿಕ ಕೆರೆಗಳು ಇಲ್ಲಿ ನಿರ್ಮಾಣಗೊಂಡಿವೆ. ಪರಿಸರ ಸಂರಕ್ಷಣೆಗೂ ಇಲ್ಲಿನ ಕೊಡುಗೆ ಮಹತ್ವದ್ದು. ಜಿಲ್ಲಾ ಕೇಂದ್ರವಾಗಲು ಈ ಪ್ರದೇಶ ಉತ್ತಮವಾಗಿದೆ. ಮುಂದಿನ ಒಂದು ತಿಂಗಳೊಳಗೆ ಈ ಸಂಬಂಧ ಆದೇಶ ನೀಡಲಾಗುವುದು ಎಂದರು.
ಸಾಧನೆಗಳಿಂದಲೇ ಭಾರತೀಯರು ಉನ್ನತ ಸ್ಥಾನಗಳಿಗೇರಿರುವುದು ಶ್ಲಾಘನೀಯ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪೆನಿಗಳ ಮುಖ್ಯಸ್ಥರ ಸ್ಥಾನ ಭಾರತೀಯರದ್ದಾಗಿರುವುದು ಹೆಮ್ಮೆಯ ವಿಚಾರ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 61 ಪದಕಗಳು ಭಾರತದ ಪಾಲಾಗಿರುವುದು ನಮ್ಮೆಲ್ಲರಿಗೂ ಸಂಭ್ರಮದ ವಿಷಯ. ಪ್ರಧಾನಿಯವರ ಖೇಲೋ ಇಂಡಿಯಾವೇ ಕ್ರೀಡಾಸ್ಪೂರ್ತಿಗೆ ಹುರುಪು ನೀಡಿದೆ ಎಂದವರು ತಿಳಿಸಿದರು.
ಕೋವಿಡ್ ಲಸಿಕೆ ನಮ್ಮ ದೇಶದಲ್ಲೇ ತಯಾರಾಗಿರುವುದು ಹೊಸ ಭಾರತ ನಿರ್ಮಾಣದ ಹೆಜ್ಜೆಯಾಗಿದೆ ಎಂದವರು ಇದೇ ವೇಳೆ ಶ್ಲಾಘಿಸಿದರು.