ಪಟ್ನಾ, ಆ 16 (DaijiworldNews/MS): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ತಮ್ಮ ಸಂಪುಟವನ್ನು ವಿಸ್ತರಿಸಿದ್ದು, ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ಗೆ ಅತಿ ಹೆಚ್ಚು ಸ್ಥಾನಗಳು ದೊರೆಕಿದೆ.
ನಿತೀಶ್ ಕುಮಾರ್ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಬಿಹಾರ ಸರ್ಕಾರದಲ್ಲಿ 31 ಸಚಿವರು ಸೇರ್ಪಡೆಗೊಂಡಿದ್ದು, ಈ ಪೈಕಿ ಆರ್ಜೆಡಿಗೆ 16 ಸಚಿವ ಸ್ಥಾನಗಳು ದೊರೆತಿದ್ದು, ಜೆಡಿಯುನಿಂದ 11, ಕಾಂಗ್ರೆಸ್ನಿಂದ ಇಬ್ಬರು, ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ)ದ ಒಬ್ಬರು ಮತ್ತು ಒಬ್ಬ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೂತನ ಸಚಿವರಿಗೆ ರಾಜ್ಯಪಾಲ ಫಾಗು ಚೌಹಾಣ್ ಪ್ರಮಾಣ ವಚನ ಬೋಧಿಸಿದ್ದಾರೆ. ನಿತೀಶ್ ಕುಮಾರ್ ಅವರು ಮೊಹಮ್ಮದ್ ಜಮಾ ಖಾನ್, ಜಯಂತ್ ರಾಜ್, ಶೀಲಾ ಕುಮಾರಿ, ಸುನಿಲ್ ಕುಮಾರ್, ಸಂಜಯ್ ಝಾ, ಮದನ್ ಸಾಹ್ನಿ, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೇಶಿ ಸಿಂಗ್, ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಯಾದವ್ ಸೇರಿದಂತೆ ತಮ್ಮ ಪಕ್ಷದ ಹೆಚ್ಚಿನ ಸಚಿವರನ್ನು ಉಳಿಸಿಕೊಂಡಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಸೇರಿದಂತೆ ಯಾದವ ಸಮುದಾಯದ ಒಟ್ಟು ಏಳು ಮಂದಿಗೆ ಆರ್ಜೆಡಿ ಸಚಿವ ಸ್ಥಾನ ನೀಡಲಾಗಿದೆ. ಆರ್ಜೆಡಿ ಕೋಟಾದಿಂದ ಭೂಮಿಹಾರ ಸಮುದಾಯಕ್ಕೆ ಸೇರಿದ ಕಾರ್ತಿಕೇಯ ಸಿಂಗ್ ಮತ್ತು ರಜಪೂತ ಸಮುದಾಯಕ್ಕೆ ಸೇರಿದ ಸುಧಾಕರ್ ಸಿಂಗ್ ಅವರಿಗೂ ಸ್ಥಾನ ಸಿಕ್ಕಿದೆ.