ಚೆನ್ನೈ, ಆ 16 (DaijiworldNews/MS): ದಕ್ಷಿಣ ಭಾರತದ ಖ್ಯಾತ ಯುವ ಸಿನಿಮಾ ವಿಮರ್ಶಕ ಕೌಶಿಕ್ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
35 ನೇ ವಯಸ್ಸಿನ ಕೌಶಿಕ್ ಅವರು, ಸೋಮವಾರ ರೋಹಿಣಿ ಮತ್ತು ಕರುಣಾಕರನ್ ಅಭಿನಯದ ಮುಂಬರುವ ತಮಿಳು ಚಿತ್ರ ಜೀವಿ 2 ನ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಿತ್ತು. ಅವರು ಕಾರ್ಯಕ್ರಮಕ್ಕೆ ಬಾರದಿದ್ದಾಗ ಅವರ ಸ್ನೇಹಿತರು ಅವರಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ. ಅವರನ್ನು ಹುಡುಕಿ ಮನೆಗೆ ಹೊರಟಾಗ ಮನೆಯಲ್ಲೇ ನಿದ್ರೆಯ ಸ್ಥಿತಿಯಲ್ಲೇ ನಿಧನ ಆಗಿರುವುದು ತಿಳಿದುಬಂದಿದೆ.
ಕೌಶಿಕ್ ಅವರು ತಮ್ಮ ಚಲನಚಿತ್ರ ವಿಮರ್ಶೆಗಳು ಮತ್ತು ತಮಿಳು ಚಲನಚಿತ್ರೋದ್ಯಮದ ಜನರ ಸಂದರ್ಶನಗಳಿಗಾಗಿ ಜನಪ್ರಿಯರಾಗಿದ್ದರು. ಕೌಶಿಕ್ ಅವರ ಅಂತಿಮ ಸಂಸ್ಕಾರ ಇಂದು ಚೆನ್ನೈನಲ್ಲಿ ನಡೆಯಲಿದೆ.
ಕೌಶಿಕ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು , ಜನಪ್ರಿಯ ತಮಿಳು ಯೂಟ್ಯೂಬ್ ಚಾನೆಲ್ ಬಿಹೈಂಡ್ವುಡ್ಸ್ನಲ್ಲಿ ತಮ್ಮ ಚಲನಚಿತ್ರ ವಿಮರ್ಶಾ ವೃತ್ತಿಯನ್ನು ಪ್ರಾರಂಭಿಸಿದ್ದರು.
ತಮಿಳು ನಟ ಧನುಷ್, ದುಲ್ಕರ್ ಸಲ್ಮಾನ್, ರಾಕುಲ್ ಪ್ರೀತ್ ಮತ್ತು ವೆಂಕಟ್ ಪ್ರಭು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಕೌಶಿಕ್ ಅವರ ಅಕಾಲಿಕ ಮರಣದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.