ರಾಯಚೂರು, ಆ 16 (DaijiworldNews/DB): ಈಚರ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳಾದ ಬಸವರಾಜ್ ಮಾಸಳಿ(40), ಬಸವರಾಜ್ರ ಪುತ್ರ ನರೇಶ್ (8) ಮತ್ತು ಚಿಕ್ಕಮ್ಮ ಭೀಮವ್ವ ಮಾಸಳಿ (50) ಮೃತಪಟ್ಟವರು. ಇವರೆಲ್ಲರೂ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಂದೇ ಬೈಕ್ನಲ್ಲಿ ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಹೊರಟಿದ್ದರು.
ರಾಯಚೂರು ಮಾರ್ಗವಾಗಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಚಲಿಸುತ್ತಿದ್ದ ಈಚರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಢಿಕ್ಕಿ ಹೊಡೆದು ರಸ್ತೆ ಬದಿಯಲ್ಲಿರುವ ಜಮೀನಿಗೆ ನುಗ್ಗಿದೆ. ಢಿಕ್ಕಿಯ ರಭಸಕ್ಕೆ ಮೂವರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಜಮೀನಿನಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈಚರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.