ಬೆಂಗಳೂರು, ಆ 16 (DaijiworldNews/DB): ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಫೋಟೋ ಬಿಟ್ಟಿರುವುದಕ್ಕೆ ಯಾವುದೇ ಬೇಸರವಿಲ್ಲಲ-. ಈ ದೇಶ ಇಬ್ಬಾಗವಾಗಲು ಅವರೇ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನೆಹರೂ ಮೊದಲ ಪ್ರಧಾನಿ ಇರಬಹುದು. ಆದರೆ ನಮಗೆ ನೇತಾಜಿ ಸುಭಾಶ್ಚಂದ್ರ ಬೋಸ್ ಅವರೇ ಮೊದಲ ಪ್ರಧಾನಿ. ಭಾರತ ಪಾಕಿಸ್ತಾನ ದೇಶ ಒಡೆದದ್ದೇ ನೆಹರೂರವರನ್ನು ಪ್ರಧಾನಿಯಾಗಿಸಲು. ವಲ್ಲಭಾಯಿ ಪಟೇಲ್ ಅಥವಾ ಸುಭಾಶ್ಚಂದ್ರ ಬೋಸ್ ಪ್ರಧಾನಿಯಾಗಿದ್ದರೆ ದೇಶ ಇಬ್ಭಾಗ ಆಗುತ್ತಿರಲಿಲ್ಲ. ದೇಶ ಇಬ್ಬಾಗವಾಗುವುದನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕೂಡಾ ವಿರೋಧಿಸಿದ್ದರು. ದೇಶದ ಈ ಪರಿಸ್ಥಿತಿಗೆ ನೆಹರೂ ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರಬೋಸ್, ವಾಜಪೇಯಿ, ನರೇಂದ್ರ ಮೋದಿ ಅವರೇ ನಮ್ಮ ಆದರ್ಶ ಎಂದವರು ಇದೇ ವೇಳೆ ತಿಳಿಸಿದರು.
ಅಮೀರ್ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ ವಿವಾದಕ್ಕೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾಗರಹಾವಿಗೆ ಹಾಲೆರೆಯುವುದು ಅವಮಾನ ಎನ್ನುವ ಅಮೀರ್ಖಾನ್ಗೆ ಕುರಿ ಕೊಯ್ಯುವುದು ಮೂಢನಂಬಿಕೆ ಎನಿಸುವುದಿಲ್ಲ. ಹಿಂದೂ ಧರ್ಮದ ವಿರುದ್ದ ಚಿತ್ರಗಳನ್ನು ಮಾಡುತ್ತಾರೆ. ಶಾರುಖ್ ಖಾನ್, ಸಲ್ಮಾನ ಖಾನ್, ಸೈಫ ಅಲಿ ಖಾನ್, ಅಮೀರ್ ಖಾನ್ ಮುಂತಾದವರು ಪಾಕಿಸ್ತಾನದ ಏಜೆಂಟರಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿರುವುದೇ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರ ಭಾರತದ ವಶವಾಗುವುದು ನಿಶ್ಚಿತ ಎಂದರು.