ಬೆಂಗಳೂರು, ಆ 16 (daijiworldNews/HR): ಶಿವಮೊಗ್ಗದಲ್ಲಿ ಸಾವರ್ಕರ್ ಜೊತೆಗೆ ಟಿಪ್ಪು ಫೋಟೋ ಕೂಡ ಹಾಕಬೇಕಿತ್ತು. ಇದೆಲ್ಲ ಕಿತಾಪತಿ ಮಾಡುವುದು ಬಿಜೆಪಿಯವರೇ ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಗಲಭೆ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಗಲಭೆಗೂ ಕಾಂಗ್ರೆಸ್ಸಿಗೂ ಏನು ಸಂಬಂಧ. ಈಶ್ವರಪ್ಪ ಬುದ್ಧಿ ಸರಿ ಇಲ್ಲದೆ ಏನೇನೋ ಮಾತನಾಡುತ್ತಿದ್ದಾರೆ. ಸಾಮರಸ್ಯ ಕಾಪಾಡಿಕೊಂಡು ಹೋಗಬೇಕಾದ್ದು ಎಲ್ಲರ ಜವಾಬ್ದಾರಿ ಎಂದರು.
ಇನ್ನು ಕೋಮು ಸಂಘರ್ಷವನ್ನು ಹುಟ್ಟುಹಾಕಿ, ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಶಿವಮೊಗ್ಗದ ಗಲಾಟೆಗೆ ಸಂಬಂಧಿಸಿದಂತೆ ವೃಥಾ ಕಾಂಗ್ರೆಸ್ ನವರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.