ಬೆಂಗಳೂರು, ಆ 16 (DaijiworldNews/DB): ಪಿಜ್ಜಾ ತಯಾರಿಗೆ ಬಳಸುವ ಹಿಟ್ಟನ್ನು ಇಡಲಾದ ಟ್ರೇ ಮೇಲೆ ಟಾಯ್ಲೆಟ್ ಬ್ರಷ್, ನೆಲ ಒರೆಸುವ ಬಟ್ಟೆಗಳನ್ನು ಇಟ್ಟಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಈ ಫೋಟೋ ಪಿಜ್ಜಾ ಪ್ರಿಯರ ಕಣ್ಣು ಕೆಂಪಾಗಿಸಿದೆ. ಡೊಮಿನೋಸ್ ಸಂಸ್ಥೆಯ ಬೆಂಗಳೂರು ಔಟ್ಲೆಟ್ವೊಂದರ ಫೋಟೋ ಇದು ಎನ್ನಲಾಗಿದೆ.
ಟ್ವಿಟರ್ ಬಳಕೆದಾರ ತುಷಾರ್ ಎಂಬುವವರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಫಿಜ್ಜಾ ತಯಾರಿಸಲು ಬಳಕೆ ಮಾಡುವ ಹಿಟ್ಟಿನ ಮೇಲೆ ಟಾಯ್ಲೆಟ್ ಬ್ರಷ್, ನೆಲ ಒರೆಸುವ ಬಟ್ಟೆಗಳು, ಪೊರಕೆಗಳನ್ನು ಇಡಲಾಗಿದೆ. ಅಲ್ಲದೆ, ಅಂಗಡಿ ತಿನಿಸುಗಳ ಬದಲಾಗಿ ಮನೆಯಲ್ಲೇ ಆಹಾರ ಸೇವಿಸಿ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನು ಕಂಡು ಪಿಜ್ಜಾ ಪ್ರಿಯರು, ನೆಟ್ಟಿಗರು ಡಾಮಿನೋಸ್ ಸಂಸ್ಥೆಯ ಮೇಲೆ ಕಿಡಿ ಕಾರಿದ್ದಾರೆ. ಅಲ್ಲದೆ, ಈ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಫೋಟೋ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಡಾಮಿನೋಸ್ ಸಂಸ್ಥೆ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಗುಣಮಟ್ಟದ ಆಹಾರವನ್ನು ವಿಶ್ವಾದ್ಯಂತ ನೀಡುವಲ್ಲಿ ನಮ್ಮ ಸಂಸ್ಥೆ ತೊಡಗಿಸಿಕೊಂಡಿದೆ. ಘಟನೆ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಈ ಸಂಬಂಧ ತನಿಖೆ ನಡೆಯಲಿದೆ. ಸಂಸ್ಥೆಯ ನಿಯಮ ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.