ಶಿವಮೊಗ್ಗ, ಆ 16 (daijiworldNews/HR): ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಜನರು ಶಾಂತಿ ಕಾಪಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ನಾವು ಕಳೆದ ಮೂರು ದಿನಗಳಿಂದ ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇಂತಹ ಸಂತಸದ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆ ನಡೆದಿರುವುದು ದುರಾದೃಷ್ಟಕರ ಎಂದು ಸಚಿವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಎರಡು ಗುಂಪುಗಳ ಮಧ್ಯೆ ವೀರ್ ಸಾವರ್ಕರ್ ಫ್ಲೆಕ್ಸ್, ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ವ್ಯಕ್ತಿಗೆ ಚಾಕು ಇರಿತ ಉಂಟಾಗಿತ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಂತಿ ಹದಗೆಟ್ಟಿತ್ತು. ಹೀಗಾಗಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಶಾಲೆ ಕಾಲೇಜಿಗೆ ರಜೆ ನೀಡಲಾಗಿದೆ.