ನವದೆಹಲಿ, ಆ 16 (DaijiworldNews/DB): ಮೌಲ್ಯಾಧಾರಿತ ಶಿಕ್ಷಣ ನೀಡುವುದು ಬಿಟ್ಟಿಯಲ್ಲ. ಕೇಂದ್ರ ಸರ್ಕಾರ ರಾಜಕೀಯ ಬದಿಗೊತ್ತಿ ನಮ್ಮ ಸೇವೆಗಳನ್ನು ಬಳಸಿಕೊಳ್ಳಲು ನಾನು ಮನವಿ ಮಾಡುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರಾಜಕೀಯ ಬದಿಗೊತ್ತಿ ನಮ್ಮ ಸೇವೆಗಳನ್ನು ಉಪಯೋಗಿಸಿಕೊಳ್ಳಲಿ. ಆ ಮೂಲಕ ನೀವು, ನಾವು ಮತ್ತು 130 ಕೋಟಿ ಜನರು ಐಕ್ಯತೆಯಿಂದ ಶಾಲೆಗಳನ್ನು ಮೇಲ್ದರ್ಜೆಗೇರಿಸೋಣ. ಎಲ್ಲಾ ರಾಜ್ಯ ಸರ್ಕಾರಗಳೂ ಇದನ್ನು ಮಾಡಲಿ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುವುದನ್ನು ಬಿಟ್ಟಿ ಎಂದು ಕರೆಯುವುದನ್ನು ನಿಲ್ಲಿಸಿ. ಏಕೆಂದರೆ ಮೌಲ್ಯಾಧಾರಿತ ಶಿಕ್ಷಣವೆಂಬುದು ಬಿಟ್ಟಿಯಲ್ಲ ಎಂದರು.
ಗುಣಮಟ್ಟದ ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನೂ ಜನ ಸಾಮಾನ್ಯರಿಗೆ ಒದಗಿಸಲು ನಾವೆಲ್ಲರೂ ಮುಂದಾಗಬೇಕು. ಇದನ್ನು ದೆಹಲಿಯಲ್ಲಿ ನಾವು ಐದು ವರ್ಷದ ಅವಧಿಯಲ್ಲಿ ಮಾಡಿ ತೋರಿಸಿದ್ದೇವೆ. ಪ್ರಸ್ತುತ ದೆಹಲಿಯ ಎಲ್ಲಾ 2.5 ಕೋಟಿ ಜನರು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ದೆಹಲಿ ಸರ್ಕಾರಕ್ಕೆ ಇದು ಸಾಧ್ಯವಾಗಿದೆ ಎಂದಾದರೆ, ದೇಶಾದ್ಯಂತ ಈ ವ್ಯವಸ್ಥೆ ಸಾಧ್ಯವಿದೆ ಎಂದವರು ಇದೇ ವೇಳೆ ತಿಳಿಸಿದರು.