ಶಿವಮೊಗ್ಗ, ಆ 16 (daijiworldNews/HR): ವೀರ ಸಾವರ್ಕರ್ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಚೂರಿ ಇರಿತ ಘಟನೆಗಳು ನಡೆದು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಹೊತ್ತು ಅನಗತ್ಯ ಬೈಕ್ ಸಂಚಾರ ನಿಷೇಧಿಸಿ, ಬೈಕ್ ನಲ್ಲಿ ಇಬ್ಬರು ಯುವಕರು ಸಂಚರಿಸದಂತೆ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ದ್ವಿ ಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ) ಅಲ್ಲದೆ ರಾತ್ರಿ 9:00 ರಿಂದ ಬೆಳಗಿನ ಜಾವ 05:00 ರವೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶಿದ್ದಾರೆ.
ಇನ್ನು ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಬಂದಿದ್ದು, ತುಂಗಾನಗರ, ದೊಡ್ಡಪೇಟೆ, ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡಿದ್ದೇವೆ ಎಂದರು
ಶಿವಮೊಗ್ಗದಲ್ಲಿ ಈಗಾಗಲೇ 5 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಬಂಧಿಸಲಾಗಿದ್ದು, ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇದಿಸಲಾಗಿದೆ.