ಜೈಪುರ, ಆ 16 (DaijiworldNews/MS): ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಮನನೊಂದಿರುವ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಕಳುಹಿಸಿದ್ದು, ತಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಶಾಸಕರಾಗಿ ಉಳಿಯುವ ಯಾವುದೇ ಹಕ್ಕು ನನಗಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಕುಡಿಯುವ ನೀರಿನ ಮಡಕೆ ಮುಟ್ಟಿದ ಎನ್ನುವ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್ನನ್ನು ಹೊಡೆದಿದ್ದರು. ಈ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು.
ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಆರ್ಥಿಕ ನೆರವು ಮತ್ತು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ನಾನು ಒತ್ತಾಯಿಸಿದ್ದೇನೆ. 24 ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡರಿರುವುದರಿಂದ ಇರುವುದರಿಂದ ರಾಜೀನಾಮೆ ನೀಡಿರುವುದಾಗಿ ಶಾಸಕ ಮೇಘವಾಲ್ ಹೇಳಿದ್ದಾರೆ.
“ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲವಾದಾಗ, ಹುದ್ದೆಯಲ್ಲಿ ಉಳಿಯವ ನಮಗೆ ಹಕ್ಕಿಲ್ಲ, ನನ್ನ ಆಂತರಿಕ ಧ್ವನಿಯನ್ನು ಆಲಿಸಿದ ಬಳಿಕ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಇನ್ಮುಂದೆ ನಾನು ಯಾವುದೇ ಸ್ಥಾನವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ. ," ಎಂದು ಬರನ್-ಅತ್ರು ಕ್ಷೇತ್ರದ ಶಾಸಕರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ