ನವದೆಹಲಿ, ಆ 15 (DaijiworldNews/MS):ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಿದರೆ ಭಾರತವು ವಿಶ್ವದ ಅಗ್ರ ರಾಷ್ಟ್ರವಾಗಬಹುದು ಎಂದು ಹೇಳುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ಕಲ್ಯಾಣ ಯೋಜನೆಗಳು "ಉಚಿತ ಕೊಡುಗೆ" ಎಂದು ಕರೆಯಲಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ದೆಹಲಿ ಸರ್ಕಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, "ಭಾರತ ಶ್ರೀಮಂತ ದೇಶವಾಗಲು ಶಿಕ್ಷಣ ಮತ್ತು ಆರೋಗ್ಯದ ರಕ್ಷಣೆ ಪ್ರಮುಖವಾಗಿದೆ. ಗುಣಮಟ್ಟದ ಶಿಕ್ಷಣದಿಂದ ಕೇವಲ ಒಂದು ಪೀಳಿಗೆಯಲ್ಲಿ ಬಡತನ ನಿರ್ಮೂಲನೆ ಮಾಡಬಹುದು. ಶಿಕ್ಷಣ ಕ್ರಾಂತಿಯಿಂದಾಗಿ ಬಡವರ ಮಗು ಉನ್ನತ ಹುದ್ದೆಗೇರುವ ಕನಸು ಕಾಣಬಹುದು. ಹೀಗಾಗಿ ಇವು ಎಂದಿಗೂ ಉಚಿತ ಕೊಡುಗೆಗಳಾಗುವುದಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯವು ಭಾರತದ್ದಾಗಿದೆ ಎಂದು ಪ್ರತಿಪಾದಿಸಿದ ಅವರು, ದೇಶದ 130 ಕೋಟಿ ಜನರು ಒಗ್ಗೂಡಿ ಭಾರತವನ್ನು ವಿಶ್ವದ "ನಂಬರ್ ಒನ್" ದೇಶವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಬೇಕಾಗಿದೆ. ನಾವು ಒಗ್ಗೂಡಿ ಬ್ರಿಟಿಷರನ್ನು ಹೊರಗೆ ಕಳುಹಿಸಿದ್ದೇವೆ. ಇಂದು ನಾವು ಒಗ್ಗೂಡಿದರೆ ಭಾರತವನ್ನು ವಿಶ್ವದ ಅಗ್ರಮಾನ್ಯ ರಾಷ್ಟ್ರವನ್ನಾಗಿ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯನಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಪ್ರವೇಶ ದೊರೆತಾಗ ಮಾತ್ರ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರುತ್ತದೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ 'ರೇವಡಿ ರೆವ್ಡಿ ಸಂಸ್ಕೃತಿ" ಹೇಳಿಕೆಗೆ ತಿರುಗೇಟು ನೀಡಿದ್ದಾರೆ.