ಬೆಂಗಳೂರು, ಆ 15 (DaijiworldNews/MS): ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಪ್ರಕರಣ ಸಂಬಂಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ.
ಸೊಸೈಟಿಗಳಲ್ಲಿ ಹಣ ವಸೂಲಿ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಸಚಿವರಿಗೆ ಸಾಮಾಜಿಕ ಹೋರಾಟಗಾರರೊಬ್ಬರು ಕರೆ ಮಾಡಿದ್ದು ಈ ವೇಳೆ 'ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೆ. ಚುನಾವಣೆ ಬರೋವರೆಗೂ ತಳ್ತಾ ಇದ್ದೀವಿ' ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ್
ಸಚಿವರಾದ ಶಿವರಾಮ ಹೆಬ್ಬಾರ್ , ಅಶ್ವತ್ಥ ನಾರಾಯಣ್ ಅವರು ಈ ಆಡಿಯೋ ಮಾಧುಸ್ವಾಮಿಯದ್ದಲ್ಲ, ಪ್ರತಿಪಕ್ಷಗಳ ಕುತಂತ್ರ ಎಂದು ಸಮರ್ಥಿಸಿಕೊಂಡಿದ್ದಾರೆ.
"ರೈತರ ಸಮಸ್ಯೆ ಬಗೆಹರಿಸಲಾಗುತ್ತಿಲ್ಲ, ಈ ಸರ್ಕಾರ ಏನೂ ಮಾಡುತ್ತಿಲ್ಲ, ಏಳೆಂಟು ತಿಂಗಳು ಇದೆ ಎಂದು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಅವರು ಹೇಳಿದ್ದು, ಅವರ ಹಿರಿತನಕ್ಕೆ ಶೋಭೆ ತರೋದಿಲ್ಲ. ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ" ಎಂದು ತೋಟಗಾರಿಕೆ ಸಚಿವ ಮುನಿರತ್ನ ಮುನಿಸು ತೋರ್ಪಡಿಸಿಕೊಂಡಿದ್ದಾರೆ.