ಬೆಂಗಳೂರು, ಆ 15 (DaijiworldNews/MS): ಪ್ರತಿ ಮನೆಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗ್ ಅಭಿಯಾನಕ್ಕಾಗಿ ತಮ್ಮ ಮನೆಯಲ್ಲಿ ತಿರಂಗ ಹಾರಿಸಲು ಹೋಗಿ ದಕ್ಷಿಣ ಕನ್ನಡ ಮೂಲದ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಜಾರಿ ಬಿದ್ದು ಮೃತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅರ್ಚಕ ನಾರಾಯಣ ಭಟ್ ಅವರ ಪುತ್ರ ವಿಶ್ವಾಸ್ ಕುಮಾರ್ ಮೃತಪಟ್ಟ ದುರ್ದೈವಿ. ಬೆಂಗಳೂರಿನ ಹೆಣ್ಣೂರಿನಲ್ಲಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ಖಾಸಗಿ ಕಂಪನಿಯ ಉದ್ಯೋಗಿಯಾದ ಇವರು ಹೆಣ್ಣೂರು ಎಚ್ಬಿಆರ್ ಬಡಾವಣೆಯ ಐದನೇ ಬ್ಲಾಕ್ನಲ್ಲಿ ಎರಡನೇ ಮಹಡಿಯಲ್ಲಿ ತಾವು ವಾಸಿಸುತ್ತಿದ್ದ ಕಟ್ಟಡದ ಟೇರಸ್ಗೆ ರಾಷ್ಟ್ರಧ್ವಜ ಹಾರಿಸಲೆಂದು ಹೋಗಿದ್ದರು. ವಿಶ್ವಾಸ್ ಅವರು ಟೇರಸ್ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಜಾರಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ತಂದೆ ನಾರಾಯಣ ಭಟ್ ಮತ್ತು ಪತ್ನಿ ವೈಶಾಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಪತ್ನಿ ವೈಶಾಲಿ, ಎರಡು ವರ್ಷದ ಮಗಳು, ಪೋಷಕರನ್ನು ಇವರು ಅಗಲಿದ್ದಾರೆ.